ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಅಕ್ರಮಗಳ ಬಗ್ಗೆ ರಾಜ್ಯ ಬಿಜೆಪಿಯು ದನಿಯೆತ್ತುತ್ತಲೇ ಇರುತ್ತದೆ.
ಇದೀಗ ಅಮೆರಿಕದ ಐತಿಹಾಸಿಕ ಸ್ವಾತಂತ್ರ್ಯ ದೇವಿ “ಲಿಬರ್ಟಿ ಆಫ್ ಸ್ಟ್ಯಾಚ್ಯೂ” ಬದಲಾಗಿ “ಲಿಬರ್ಟಿ ಆಫ್ ಲೂಟಿ” ಎಂದು ಸಿದ್ದರಾಮಯ್ಯ ಅವರ ಫೋಟೋದೊಂದಿಗೆ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಹಗರಣಗಳು ತೆರೆದಷ್ಟು ಬಯಲಾಗುತ್ತಲೇ ಹೋಗುತ್ತಿವೆ. ಕನ್ನಡಿಗರು ಮುಂದೊಂದು ದಿನ ಇಂಥದ್ದೊಂದು ಪ್ರತಿಮೆ ನಿರ್ಮಾಣ ಮಾಡಿದರೂ ಅಚ್ಚರಿ ಇಲ್ಲ ಎಂದು ಕಿಚಾಯಿಸಿದೆ.
ಮುಂದೊಂದು ದಿನ ಕನ್ನಡಿಗರು ಇಂತಹ ಒಂದು ಪ್ರತಿಮೆ ನಿರ್ಮಾಣ ಮಾಡಿದರೂ ಅಚ್ಚರಿ ಇಲ್ಲ..!. ಭ್ರಷ್ಟ ಲಾಟರಿ ಸಿಎಂ ಸಿದ್ದರಾಮಯ್ಯ ಸರ್ಕಾರ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಕನ್ನಡಿಗರಿಗೆ ಬೋಗಸ್ ಗ್ಯಾರಂಟಿಗಳ ಟೋಪಿ ಹಾಕಿ ಹತ್ತಾರು ಭ್ರಷ್ಟಾಚಾರಗಳ ಮೂಲಕ ಸುಮಾರು ₹10 ಸಾವಿರ ಕೋಟಿಗೂ ಹೆಚ್ಚಿನ ಸ್ಕ್ಯಾಂಗಳನ್ನು ಮಾಡಿದೆ.
ಮುಡಾದಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಪ್ರಭಾವ ಬೀರಿ ತಮ್ಮ ಪತ್ನಿ ಹೆಸರಿಗೆ ದುಬಾರಿ ಬೆಲೆಯ 14 ಸೈಟ್ ಗಳನ್ನು ಪಡೆದುಕೊಂಡದ್ದು ನಮಗೆಲ್ಲಾ ಗೊತ್ತಿರುವ ವಿಷಯ. ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸೈಟ್ ವಾಪಸ್ ಕೊಟ್ಟು ತಾವೊಬ್ಬ ನಿಷ್ಠಾವಂತ ಎಂದು ಬಿಂಬಿಸಿಕೊಳ್ಳಲು ವಿಫಲ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿದ್ದ ನೂರಾರು ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ ಅದರಲ್ಲಿ ಮೋಜು ಮಸ್ತಿ ಮಾಡಿದ್ದು ಅಲ್ಲದೆ, ಬಳ್ಳಾರಿ ಲೋಕಸಭಾ ಚುನಾವಣೆಗೆ ದುರುಪಯೋಗ ಪಡಿಸಿಕೊಂಡು ಅಕ್ರಮವೆಸಗಿದೆ.
ಕಾರ್ಮಿಕ ಇಲಾಖೆಯಲ್ಲಿ ಸಚಿವ ಸಂತೋಷ್ ಲಾಡ್ ಹೆಲ್ತ್ ಕಿಟ್, ಹೆಲ್ತ್ ಚೆಕಪ್ ಹೆಸರಲ್ಲಿ ನೂರಾರು ಕೋಟಿ ರೂಪಾಯಿಯನ್ನು ದೋಚಿದ್ದಾರೆ. ಈ ಸಂಬಂಧ ಎರಡೆರಡು ಬಾರಿ ನ್ಯಾಯಾಲಯ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿದರೂ ಲಜ್ಜೆಬಿಟ್ಟು ನಿಂತಿದೆ.
ಒಂದು ಕಡೆ ಅಪ್ಪನ ಹೆಸರಿನಿಂದ ಮಂತ್ರಿಯಾಗಿರುವ ಭ್ರಷ್ಟ ಪ್ರಿಯಾಂಕ್ ಖರ್ಗೆ ಅವರು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಮಿಷನ್ ದಂಧೆ ನಡೆಸುತ್ತಿದ್ದರೆ, ಮತ್ತೊದೆಡೆ ಕೆಐಎಡಿಬಿಯಲ್ಲಿ ಅಕ್ರಮವಾಗಿ ಸೈಟ್ ಗಳನ್ನು ಪಡೆಯುವ ಮೂಲಕ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ನುಂಗಿದ್ದಾರೆ.
ಅಬಕಾರಿ ಇಲಾಖೆಯಲ್ಲಂತೂ ವರ್ಗಾವಣೆ, ನೇಮಕಾತಿ, ಲೈಸೆನ್ಸ್ ಟ್ರಾನ್ಸಫರ್, ಲೈಸೆನ್ಸ್ ನವೀಕರಣ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬರುತ್ತಲೇ ಇವೆ. ವಸತಿ ಇಲಾಖೆಯಲ್ಲಿ ಕಾಸು ಕೊಟ್ಟರೆ ಸೂರು ಎನ್ನುವ ಹೊಸ ಪರಂಪರೆಯನ್ನೇ ಸಚಿವ ಜಮೀರ್ ಅಹ್ಮದ್ ಅವರು ಹುಟ್ಟು ಹಾಕಿರುವ ಸತ್ಯವನ್ನು ಕಾಂಗ್ರೆಸ್ಸಿನ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರೇ ಜಗಜ್ಜಾಹೀರು ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಹಗರಣಗಳು ತೆರೆದಷ್ಟು ಬಯಲಾಗುತ್ತಲೇ ಹೋಗುತ್ತಿವೆ. ಹೇಳಿದ್ದು 10 ಕೆ.ಜಿ ಅಕ್ಕಿ ಮಾಡಿದ್ದು 10 ಸಾವಿರ ಕೋಟಿ ಲೂಟಿ. ಸಿದ್ದರಾಮಯ್ಯ ಅವರ ಇಷ್ಟೆಲ್ಲಾ ಹಗರಣಗಳನ್ನು ನೋಡಿ ಕನ್ನಡಿಗರು ರಾಜ್ಯದಲ್ಲಿ ವಾರಕ್ಕೊಂದು ಒಂದು ಸ್ಟ್ಯಾಚೂ ನಿರ್ಮಾಣ ಮಾಡಿದರೂ ಅಚ್ಚರಿ ಪಡಬೇಕಿಲ್ಲ.




