ಸಿರುಗುಪ್ಪ: ನಗರದ ಡ್ರೈವರ್ ಕಾಲೋನಿಯ ಮೇಲ್ಭಾಗದಲ್ಲಿರುವ ಪ್ರಭಾವಿ ರೈತರೊಬ್ಬರ ಜಮೀನಿನಲ್ಲಿರುವ ಕೆರೆಯೊಂದು ಇಲ್ಲಿನ ನಿವಾಸಿಗಳಿಗೆ ಕಂಟಕವಾಗಿದ್ದು, ಅದರ ನೀರಿನಲ್ಲಿ ಬರುವ ಹುಳು ಹುಪ್ಪಟೆಯಲ್ಲೇ ಜೀವನ ನಡೆಸುವ ಭೀತಿ ಎದುರಾಗಿದೆ.
ಕಳೆದೆರಡು ದಶಕಗಳಿಂದಲೂ ಮಳೆಗಾಲದಲ್ಲಿ ತುಂಬುವ ಕೆರೆಯ ಹೆಚ್ಚಿನ ನೀರು ಇಲ್ಲಿನ ನಿವಾಸಿಗಳ ಮನೆಗಳಿಗೆ ಸಣ್ಣಪುಟ್ಟ ಗುಡಿಸಿಲುಗಳಿಗೆ ನುಗ್ಗಿ ಜೀವನಕ್ಕೆ ತೊಂದರೆಯಾಗಿ ಪರದಾಡುವ ಸ್ಥಿತಿ ಬಂದೊದಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ನಾವಿಲ್ಲಿ ವಾಸ ಮಾಡುತ್ತಿದ್ದೇವೆ. ಕೆರೆಗೆ ಅಕ್ರಮವಾಗಿ ಕಾಲುವೆ ನೀರಿನಿಂದ ಕೆರೆ ತುಂಬಿ ಹೆಚ್ಚಿದಾಗ ಬರುವ ನೀರೆಲ್ಲಾ ನಮ್ಮ ವಾಸಸ್ಥಳಕ್ಕೆ ಹರಿದು ಬರುತ್ತದೆ. ಪ್ರತಿ ಮಳೆಗಾಲದಲ್ಲೂ ಇದೇ ಪರಿಸ್ಥಿತಿ ಉಂಟಾಗಿ ನಡೆದಾಡಲು ತೊಂದರೆಯಾಗುತ್ತದೆ. ಏನು ಮಾಡೋದು ಸ್ವಾಮಿ ದೊಡ್ಡವರ ಮುಂದೆ ನಮ್ಮಂತಹ ಸಣ್ಣವರ ಗೋಳು ಕೇಳುವವರು ಯಾರು?.
ನೀರಿನಲ್ಲಿ ವಿಷ ಜಂತುಗಳು, ಹುಳು ಹುಪ್ಪಟೆಗಳು ಬರುತ್ತವೆ. ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಹುಳು ಹುಪ್ಪಟೆಗಳಲ್ಲೇ ಜೀವನ ನಡೆಸಬೇಕಾಗಿದೆ ಎಂದು ಸ್ಥಳೀಯರಾದ ಗೌಸಿಯಾಬೀ, ಅಯ್ಯಪ್ಪ, ಬಸವರಾಜ ಅಳಲು ತೋಡಿಕೊಂಡರು.
ಕೆರೆಗೆ ಅಕ್ರಮವಾಗಿ ಬಾಗೇವಾಡಿ ಕಾಲುವೆಯ ನೀರು ಹರಿದು ಬರುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು. ಪ್ರಭಾವಿ ವ್ಯಕ್ತಿಯ ಕೈಗೊಂಬೆಯಾಗಿರಬಹುದೆಂಬ ಶಂಕೆ ಇಲ್ಲಿನ ಜನರಲ್ಲಿ ಮೂಡಿದೆ. ಬಂಗಲೆಯಲ್ಲಿ ವಾಸ ಮಾಡುವ ಅಧಿಕಾರಿಗಳು ಇಲ್ಲಿನ ಇಲಾಖೆಗಳು ಮಾತ್ರ ಕಣ್ಮುಚ್ಚಿ ಕುಳಿತಂತಿದೆ.
ಒಂದು ವೇಳೆ ಕೆರೆಯ ದಡ ಕುಸಿದಲ್ಲಿ ಇಲ್ಲಿನ ಹಲವಾರು ಕುಟುಂಬಗಳು ನೀರಿನಲ್ಲಿ ಕೊಚ್ಚಿಹೋಗುವ ಭೀತಿಯಲ್ಲಿದ್ದು, ಇಲಾಖೆಗಳ ಮೊರೆಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಅಸಹಾಯಕತೆ ಕಂಡುಬಂದಿತು.
ಜಮೀನನಲ್ಲಿನ ಕೆರೆಯ ನೀರು ಹರಿದು 16ನೇ ವಾರ್ಡ್ 30ನೇ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಹರಿದು ಹಲವು ಮನೆಗಳಿಗೆ ನುಗ್ಗಿ ಡಾಂಬಾರು ರಸ್ತೆಯನ್ನು ಸೀಳಿಕೊಂಡು ಕೊನೆಗೆ ಚರಂಡಿಯ ಪಾಲಾಗುತ್ತಿದೆ. ಇನ್ನು ಮುಂದೆಯಾದರೂ ಸಂಬಂದಿಸಿದ ನೀರಾವರಿ ಇಲಾಖೆ, ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲುವೆ ಮೂಲಕ ಹರಿದು ಬರುವ ಕೆರೆಯ ಹೆಚ್ಚುವರಿ ನೀರು ತಡೆಯಬೇಕೆಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದರು.
ವರದಿ : ಶ್ರೀನಿವಾಸ ನಾಯ್ಕ




