ಬೆಂಗಳೂರು: ಕನ್ನಡ ಚಿತ್ರರಂಗದ ‘ನಾದಬ್ರಹ್ಮ’ ಎಂದೇ ಜನಪ್ರಿಯರಾಗಿರುವ ಹಿರಿಯ ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರನ್ನು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ರಾಜ್ಯ ಸರ್ಕಾರವು ಅಧಿಕೃತವಾಗಿ ಆಯ್ಕೆ ಮಾಡಿದೆ.
ಕರ್ನಾಟಕ ಸರ್ಕಾರವು ಜ.13 ರಂದು ಹೊರಡಿಸಿದ್ದ ಆದೇಶದಂತೆ ರಚಿಸಲಾಗಿದ್ದ ಆಯ್ಕೆ ಸಮಿತಿಯು, ಫೆಬ್ರವರಿ 4 ರಂದು ಸಭೆ ಸೇರಿ ಕನ್ನಡ ಚಲನಚಿತ್ರ ರಂಗಕ್ಕೆ ಡಾ. ಹಂಸಲೇಖ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಸಮಿತಿಯು ಅವಿರೋಧವಾಗಿ ಶಿಫಾರಸು ಮಾಡಿದ ಮೂವರು ಗಣ್ಯರ ಪಟ್ಟಿಯಲ್ಲಿ ಡಾ. ಹಂಸಲೇಖ ಅವರ ಹೆಸರನ್ನು ಸರ್ಕಾರವು ಅಂತಿಮಗೊಳಿಸಿದೆ.
ಹಂಸಲೇಖ ಅವರು ಬಹುಮುಖ ಪ್ರತಿಭೆ. ಕೇವಲ ಸಂಗೀತ ನಿರ್ದೇಶನ ಮಾತ್ರವಲ್ಲದೆ, ಗೀತ ರಚನೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲೂ ಅವರು ತಮ್ಮ ಮುದ್ರೆ ಒತ್ತಿದ್ದಾರೆ.




