ನವೆದಹಲಿ: ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊಡಿ ಬಡಿ ಆಟದ ಸಂಭ್ರಮವಿದೆ. ಕ್ರಿಕೆಟ್ ಕ್ರೀಡೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಯುವಜನತೆಗೆ ಇದೊಂದು ರೀತಿಯಲ್ಲಿ ಹಬ್ಬ. ಐಪಿಎಲ್ ನ ಈ 18ನೇ ಸೀಸನ್ ನಲ್ಲಿ ಪಂದ್ಯಗಳು ಶುರುವಾಗುವ ಮುನ್ನ ಬಾಲಿವುಡ್ ತಾರೆಯರು ಹಾಗೂ ಪ್ರಸಿದ್ಧ ಗಾಯಕರು ಸೊಗಸಾದ ಪ್ರದರ್ಶನ ನೀಡಿ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದರು. ಇದಾದ ಬಳಿಕ ವಿವಿಧ 10 ತಂಡಗಳ ಬ್ಯಾಟರ್ ಗಳು ಹಾಗೂ ಬೌಲರ್ ಗಳ ಸರದಿ. ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್, ಅಷ್ಟೇ ಕರಾರುವಕ್ಕಾದ ಕೆಲವು ವಿಶ್ವಶ್ರೇಷ್ಠ ಕ್ರಿಕೆಟಿಗರ ಆಟ ಫ್ಯಾನ್ಸ್ ಕಿಕ್ಕೇರಿಸುತ್ತಿವೆ. ಅಷ್ಟೇಕೆ?, ಐಪಿಎಲ್ ಅಂಗಳದಲ್ಲಿ ಹೊಸಬರೂ ತಾವೇನು ಕಮ್ಮಿ ಎಂದು ಲೀಲಾಜಾಲವಾಗಿ ಆಡುತ್ತಿದ್ದಾರೆ.
ಇದರ ಜೊತೆ ಜೊತೆಗೆ ಕ್ರಿಕೆಟಿಗರು ಮತ್ತು ಬಾಲಿವುಡ್ ಸಿನಿಮಾ ತಾರೆಯರ ನಡುವಿನ ನಂಟೂ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದರಲ್ಲಿ ಬಹಳ ಪ್ರಮುಖವಾಗಿ ಒಬ್ಬ ನಟಿಯ ಹೆಸರು ಭಾರತೀಯ ಕ್ರಿಕೆಟಿಗನೊಂದಿಗೆ ಕೇಳಿ ಬರುತ್ತಿವುದನ್ನು ನೀವು ಗಮನಿಸಿರಬಹುದು. ಅವರು ಮತ್ತಾರೂ ಅಲ್ಲ ಬಾಲಿವುಡ್ ಚೆಲುವೆ ಊರ್ವಶಿ ರೌಟೇಲಾ. ಇವರ ಹೆಸರು ರಿಷಭ್ ಪಂತ್ ಅವರೊಂದಿಗೆ ತಳುಕು ಹಾಕಿಕೊಳ್ಳುತ್ತಿರುತ್ತದೆ. ಪಂತ್ ಕೂಡ ಊರ್ವಶಿ ಹೆಸರಿನ ಮೇಲೆ ಮೈದಾನದಲ್ಲಿ ಹಲವು ಪರೋಕ್ಷವಾಗಿ ಗುನುಗಿದ್ದುಂಟು. ಇಬ್ಬರ ಮುನಿಸೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದಾಗಿ ಅಭಿಮಾನಿಗಳಿಗೆ ಅನೇಕ ಬಾರಿ ಆಹಾರವಾಗಿದೆ.
ಹಾಗಿದ್ದರೆ, ಊರ್ವಶಿಯ ನೆಚ್ಚಿನ ಕ್ರಿಕೆಟಿಗರು ಯಾರು?: ಇತ್ತೀಚೆಗೆ ಯಾಕೋ ಊರ್ವಶಿ ಅವರು ರಿಷಬ್ ಪಂತ್ ರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಗುಲ್ಲು. ಇದಕ್ಕೆ ಪರೋಕ್ಷ ಪುರಾವೆಯೂ ಈಚೆಗೆ ಸಿಕ್ಕಿದೆ. ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗರು ಯಾರು ಎಂದು ಕೇಳಲಾಯಿತು. ಇದಕ್ಕವರು, ಇಡೀ ವಿಶ್ವದಲ್ಲೇ ನನ್ನ ನೆಚ್ಚಿನ ಕ್ರಿಕೆಟಿಗರೆಂದರೆ ಅದು ವಿರಾಟ್ ಕೊಹ್ಲಿ ಮತ್ತು ಎಂ.ಎಸ್.ಧೋನಿ ಎಂದರು. ಇಂಥದ್ದೊಂದು ಹೇಳಿಕೆ ಕಿವಿಗೆ ಬಿದ್ದಿದ್ದೇ ತಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರದರ್ಶನ ಶುರು ಮಾಡಿದ್ದಾರೆ.
ಹೀಗಾಗಿ, ರಿಷಬ್ ಪಂತ್ ಕ್ರಿಕೆಟಿಗನಾಗಿ ನನಗಿಷ್ಟವಿಲ್ಲ ಎಂದು ರೌಟೇಲಾ ಪರೋಕ್ಷವಾಗಿ ಹೇಳಿದಂತಾಯಿಲ್ಲವೇ?. ಎಂಬುದು ಫ್ಯಾನ್ಸ್ ಪ್ರಶ್ನೆ. ಇದು ಇಷ್ಟಕ್ಕೆ ಮುಗಿಯಲಿಲ್ಲ. ಇದೇ ಸಂದರ್ಶನಗಳಲ್ಲಿ ಪಂತ್ ಬಗ್ಗೆ ಹಲವು ಬಾರಿ ಪ್ರಶ್ನೆಗಳನ್ನು ಕೇಳಲಾಯಿತು. ಆದರೆ ಊರ್ವಶಿ ಅವನ್ನೆಲ್ಲ ನಿರ್ಲಕ್ಷಿಸಿ ಪಂತ್ ಪರವಾಗಿ ಏನನ್ನೂ ಉಸುರಲಿಲ್ಲ.