ತುರುವೇಕೆರೆ: –ಪಟ್ಟಣದ ವಿಶ್ವವಿಜಯ ವಿದ್ಯಾಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ಪುಟಾಣಿ ಮಕ್ಕಳಿಗೆ ರಾಧಾಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದರು. ಶಾಲೆಯಲ್ಲಿ ಎಲ್.ಕೆ.ಜಿ. ಇಂದ 2 ನೇ ತರಗತಿಯ ಮಕ್ಕಳಿಗೆ ರಾಧಾಕೃಷ್ಣ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ರಾಧಾಕೃಷ್ಣ ವೇಷ ತೊಡಿಸಿ ಸ್ಪರ್ಧೆಗೆ ಕರೆದೊಯ್ದಿದ್ದಲ್ಲದೆ ಪುಟ್ಟ ಪುಟ್ಟ ರಾಧಾಕೃಷ್ಣರನ್ನು ಕಣ್ತುಂಬಿಕೊಂಡು, ಪೋಟೋ ತೆಗೆದುಕೊಂಡು ಸಂತಸಪಟ್ಟರು.
ಸುಮಾರು 150 ಕ್ಕೂ ಅಧಿಕ ಮಕ್ಕಳು ರಾಧಾಕೃಷ್ಣರ ವೇಷಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆ ಮಾತ್ರವಲ್ಲದೆ ಶ್ರೀಕೃಷ್ಣನ ಹಾಡು, ನೃತ್ಯ, ಕಥೆ ಮತ್ತು ಭಗವದ್ಗೀತೆಗಳನ್ನು ಮಕ್ಕಳಿಂದ ಹೇಳಿಸಲಾಯಿತು. ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮೀವಿಶ್ವೇಶ್ವರಯ್ಯ ಅವರು ಮಕ್ಕಳಿಗೆ ಕೃಷ್ಣ ಕುಚೇಲರ ಸ್ನೇಹಸಂಬಂಧದ ಕಥೆಯನ್ನು ಹೇಳಿದರು. ಶಾಲಾ ನಿರ್ದೇಶಕಿ ಶೋಭಾಸುಬ್ರಮಣ್ಯ ಅವರು ಶ್ರೀಕೃಷ್ಣನ ಗುರುಗಳಾದ ಸಾಂದೀಪನಿ ಗುರುಗಳ ಬಗ್ಗೆ, ಗುರು ಮತ್ತು ಶಿಷ್ಯರ ಸಂಬಂಧದ ಬಗ್ಗೆ ತಿಳಿಸಿಕೊಟ್ಟರು. ಆಡಳಿತಾಧಿಕಾರಿ ಪ್ರಶಾಂತ್ ಭಗವದ್ಗೀತೆಯ ಶ್ಲೋಕಗಳ ಅರ್ಥ ತಿಳಿಸಿದರು. ಕಾರ್ಯಕ್ರಮದಲ್ಲಿ ನವೀನ್, ಶಾಲೆಯ ಬೋಧಕ, ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್