ಸಾಮಾನ್ಯವಾಗಿ ಕಾರು, ಬೈಕ್, ನಿವೇಶನಗಳ ಮೇಲೆ ಸಾಲ ಕೊಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದ್ದೂರಿ ಮದುವೆ ಆಗಬೇಕು ಅನ್ನೋರಿಗೆ ಸಾಲ ಕೊಡಲಾಗುತ್ತಿದೆ. ಸಾಲ ತೆಗೆದುಕೊಂಡ ಬಳಿಕ ಅದನ್ನು ಇಎಂಐ ಮೂಲಕ ಪೇ ಮಾಡಬೇಕು. ಹಾಗಾದರೆ ಏನಿದು ಹೊಸ ಟ್ರೆಂಡ್? ಎಲ್ಲಿ ಲೋನ್ ಸಿಗುತ್ತೆ? ಯಾರು ಕೊಡ್ತಾರೆ? ಅದರ ಸಂಪೂರ್ಣ ವರದಿ ಈಗ ತಿಳಿಯೋಣ.
ಮದುವೆ ಮಾಡಿಕೊಳ್ಳುವ ಸಮಯ ಹೇಳಿಕೇಳಿ ಬರುವಂತದ್ದಲ್ಲ. ಕಂಕಣಭಾಗ್ಯ ಕೂಡಿ ಬಂದರೆ ಮದುವೆ ಆಗಲೇ ಬೇಕು. ದಿಢೀರ್ ಅಂತ ಮದುವೆ ಫಿಕ್ಸ್ ಆದರೆ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವುದಿರಲಿ, ಸಣ್ಣದಾಗಿ ಕಾರ್ಯಕ್ರಮ ಮಾಡಿಕೊಳ್ಳುವುದು ಕಷ್ಟವಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಸಹಾಯವಾಗಲೆಂದು ಮದುವೆ ಸಾಲ ನೀಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ.
ಹೌದು ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತು ಇದೆ. ಮದುವೆ ಮಾಡೋದಕ್ಕೆ ಹಾಗೂ ಮನೆ ಕಟ್ಟೋದಕ್ಕೆ ಎರಡಕ್ಕೂ ಕೈ ತುಂಬಾ ದುಡ್ಡು ಬೇಕು. ಮದುವೆಗೆ ಎಷ್ಟೇ ಅಳೆದು ತೂಗಿದರೂ ಕೂಡ ಖರ್ಚಿಗೆ ಹಣ ಸಾಕಾಗುವುದಿಲ್ಲ. ಅದರಲ್ಲೂ ಇಂತಹ ಸಂದರ್ಭದಲ್ಲಿ ಜನ ಮನೆ ಜಮೀನನ್ನು ಮಾರಾಟ ಮಾಡುತ್ತಾರೆ. ಇಂತಹ ಜನರಿಗೆ ಅಥವಾ ಬಜೆಟ್‌ಗಿಂತ ಹೆಚ್ಚಾಗಿ ಖರ್ಚು ಮಾಡಿ ಮದುವೆ ಆಗಬೇಕು ಅನ್ನೋರಿಗೆ ವೆಡ್ಡಿಂಗ್ ಪ್ಲಾನರ್‌ಗಳು ಇಎಂಐ ಆಪ್ಷನ್‌ಗಳನ್ನು ಕೊಡುತ್ತಿದ್ದಾರೆ. ಈ ವೆಡ್ಡಿಂಗ್ ಪ್ಲಾನರ್‌ಗಳು ಸ್ವತ: ಅವರೇ ಅಥವಾ ಫೈನಾನ್ಷಿಯಲ್ ಕಂಪನಿ ಅಥವಾ ಬ್ಯಾಂಕ್‌ಗಳಿಂದ ಇಎಂಐ ಸಾಲ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ. ಹೀಗಾಗಿ ವೆಡ್ಡಿಂಗ್ ಪ್ಲಾನ್‌ಗಳಲ್ಲಿ ಇಎಂಐ ಸೌಲಭ್ಯವಿದೆ ಎಂದು ಪ್ರಚಾರ ಕೂಡ ಮಾಡುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇವೆಂಟ್ ಪ್ಲಾನರ್ ಅರುಣ್, ‘ಬೆಂಗಳೂರಿನಲ್ಲಿ ಹೆಚ್ಚೆಚ್ಚು ದುಬಾರಿ ಮದುವೆಗಳೇ ಆಗುತ್ತವೆ. 5 ಲಕ್ಷ, 10, 15ರಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರು ಇರುತ್ತಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮದುವೆ ಮಾಡಿಕೊಳ್ಳುತ್ತಾರೆ. ಜನ ಯಾಕೆ ತುಂಬಾ ಹಣ ಖರ್ಚು ಮಾಡಿ ಮದುವೆ ಆಗ್ತಾಯಿದ್ದಾರೆ ಅಂದರೆ ಹೊಸ ಹೊಸ ವೆಡ್ಡಿಂಗ್ ಪ್ಲಾನರ್‌ಗಳು ಬೆಂಗಳೂರಿನಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ವೆಡ್ಡಿಂಗ್ ಲೋನ್ ಸಾಕಷ್ಟು ಹರಿದಾಡುತ್ತಿದೆ. ತುಂಬಾ ಜನ ಮದುವೆಗಾಗಿ ಸ್ವಲ್ಪ ಮಾತ್ರ ಹಣ ಕೂಡಿ ಇಟ್ಟಿರುತ್ತಾರೆ. ಹೀಗಿರುವಾಗ ಹೆಚ್ಚುವರಿ ಹಣ ಬೇಕು ಅಂದರೆ ವೆಡ್ಡಿಂಗ್ ಲೋನ್ ಮಾಡಿಕೊಳ್ಳಬಹುದು. ಇದು ಅವರಿಗೆ ಸಹಾಯ ಮಾಡುತ್ತದೆ’ ಎಂದಿದ್ದಾರೆ.
ಈ ವೆಡ್ಡಿಂಗ್ ಪ್ಲಾನರ್ ನೀಡುವ ವೆಡ್ಡಿಂಗ್ ಪ್ಲಾನ್‌ನಲ್ಲಿ ಹೋಟೆಲ್, ಅತಿಥಿಗಳು, ಫೋಟೋ ಗ್ರಾಫರ್ ಹೀಗೆ ಒಂದೇ ಸಲಾದ ಅಡಿ ಖರ್ಚು ಮಾಡಬಹುದು. ಇದರಿಂದಾಗಿ ಒಟ್ಟಿಗೆ ಹಣವನ್ನು ತೀರುಸುವ ಸಮಸ್ಯೆ ಇಲ್ಲದೆ ಪ್ರತೀ ತಿಂಗಳು ತೀರಿಸಬಹುದು ಎನ್ನುವ ಮನಸ್ಥಿತಿ ಇರುವವರಿಗೆ ಇದು ಅವಕಾಶವಾಗುತ್ತದೆ. ಒಟ್ಟಿನಲ್ಲಿ ಇದುವರೆಗೂ ಫೋನ್, ಬೈಕ್, ಕಾರು, ಮನೆ ಸಾಲಗಳನ್ನು ಇಎಂಐ ಮೂಲಕ ಕಟ್ಟುತ್ತಿದ್ದ ಜನ ಇದೀಗ ಮದುವೆಗೂ ಸಹ ಇಎಂಐ ಸಾಲ ಮಾಡಿಕೊಳ್ಳುವಂತಾಗಿದೆ. ಆದರೂ ಮದುವೆ ಬದುಕಿಗೆ ನಷ್ಟವನ್ನುಂಟು ಮಾಡದಿರಲಿ. ಮ್ಯಾರೇಜ್ ಲೋನ್ ತೆಗೆದುಕೊಳ್ಳುವ ಮುನ್ನ ಒಮ್ಮೆ ವಿಚಾರ ಮಾಡುವುದು ಒಳ್ಳೆಯದು.