ತುರುವೇಕೆರೆ: ಪಟ್ಟಣದ ಮಾಯಸಂದ್ರ ವೃತ್ತದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ವತಿಯಿಂದ ನಿರ್ಮಿಸಲಾದ ಸಾರ್ವಜನಿಕರ ವಿಶ್ರಾಂತಿ ತಾಣವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಪುರುಷ ಪ್ರಧಾನ ಸಮಾಜ ಎಂಬ ಕಾಲವೊಂದಿತ್ತು, ಆದರೆ ಪ್ರಸ್ತುತ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರದಲ್ಲೂ ಅದ್ವಿತೀಯವಾದ ಸಾಧನೆಗೈದಿದ್ದಾರೆ. ಯಾವುದೇ ಕುಟುಂಬ ನೆಮ್ಮದಿಯ ಬದುಕನ್ನು ಸಾಗಿಸುತ್ತಿದೆ ಎಂದರೆ ಅದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗುತ್ತದೆ. ಸ್ವಸಹಾಯ ಸಂಘಗಳು, ಸಂಘ ಸಂಸ್ಥೆಗಳ ಮೂಲಕ ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದು ಮಕ್ಕಳ ಶಿಕ್ಷಣ, ಕೌಟುಂಬಿಕ ನಿರ್ವಹಣೆ ಸೇರಿದಂತೆ ಸ್ವಾವಲಂಬಿ ಬದುಕನ್ನು ಸಹ ಸಾಗಿಸುತ್ತಿದ್ದಾರೆ ಎಂದರು.
ತುರುವೇಕೆರೆ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಮಹಿಳೆಯರು ಕಳೆದ 4 ವರ್ಷದಿಂದ ಕ್ಷೇತ್ರದಲ್ಲಿ ಅಶಕ್ತ ಮಹಿಳೆಯರಿಗೆ ಅಗತ್ಯ ನೆರವು, ಸ್ವ ಉದ್ಯೋಗ ಕಾರ್ಯಾಗಾರ, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ. ಈಗಾಗಲೇ ಬಾಣಸಂದ್ರ ರಸ್ತೆಯಲ್ಲಿ ಸಾರ್ವಜನಿಕ ತಂಗುದಾಣ ನಿರ್ಮಿಸಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ. ಇದೀಗ ಮಾಯಸಂದ್ರ ವೃತ್ತದಲ್ಲಿ ಮತ್ತೊಂದು ತಂಗುದಾಣವನ್ನು ಮಾಡಿ ಮಹಿಳಾಮಣಿಗಳು ದಾಖಲೆ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಚಟುವಟಿಕೆಗಳು ಇನ್ನರ್ ವೀಲ್ ಮಹಿಳೆಯರಿಂದ ಆಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಶಾಸಕರ ಪುತ್ರಿ, ವೈದ್ಯೆ ಡಾ.ಆಶಾ ಚೌದ್ರಿ ಅವರನ್ನು ಸನ್ಮಾನಿಸಲಾಯಿತು. ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾವತಿಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಆಶಾ ರಾಜಶೇಖರ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಚಿದಾನಂದ್, ಮಧು, ಎನ್.ಆರ್. ಸುರೇಶ್, ಸ್ವಪ್ನನಟೇಶ್, ಜಯಮ್ಮ, ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಮಾಜಿ ಅಧ್ಯಕ್ಷೆ ಲತಾಪ್ರಸನ್ನ, ಕಾರ್ಯದರ್ಶಿ ಆನಂದಜಲ, ಖಜಾಂಚಿ ಸವಿತಅನಿಲ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ,. ಒಕ್ಕಲಿಗರ ಸಂಘದ ನಿರ್ದೇಶಕ ಕಾಂತರಾಜು ಸೇರಿದಂತೆ ಇನ್ನರ್ ವೀಲ್ ಸದಸ್ಯರುಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್