ಕಲಬುರಗಿ : ಕಲಬುರಗಿ ವಿವಿ ಹಗರಣದ ಸರಮಾಲೆಯಲ್ಲಿ ಸಿಲುಕಿ ಭ್ರಷ್ಟಾಚಾರದ ಕೂಪವಾಗಿದೆ. ಇದೀಗ ವಿವಿ ಮೇಲೆ ಲೋಕಾಯುಕ್ತ ರೇಡ್ ಆಗಿದ್ದು, ಮತ್ತಷ್ಟು ಹಗರಣ ಬೆಳಕಿಗೆ ಬರುವ ಸಾಧ್ಯತೆ ಇದೆ.
ಲೋಕಾಯುಕ್ತ ಎಸ್.ಪಿ ಬಿಕೆ ಉಮೇಶ್ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ನಡೆಸಲಾಗಿದೆ.ಗುಲ್ಬರ್ಗಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಡುಬ್ಲಿಕೇಟ ನೀಡುವಲ್ಲಿ ವಿಳಂಬ ನೀತಿ ಹಾಗೂ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ಏಕಕಾಲಕ್ಕೆ ಐದು ತಂಡ ದಾಳಿ ನಡೆಸಿದೆ.
ಅಟೆಂಡೆನ್ಸ್ ಪುಸ್ತಕ, ಚಲನವಲನ ರಿಜಿಸ್ಟರ್, ಕ್ಯಾಸ್ ರಜಿಸ್ಟರ್ ಪರಿಶೀಲನೆ ಮಾಡಿದ್ದಾರೆ.ಲೋಕಾಯುಕ್ತ ಎಸ್. ಪಿ. ಉಮೇಶ್, ಡಿವೈಎಸ್ಪಿ ಗೀತಾ ಬೇನಾಳ, ಡಿವೈಎಸ್ಪಿ ಹನುಮಂತ್ ರಾಯ, ಇನ್ಸ್ಪೆಕ್ಟರ ಸಂತೋಷ್, ಸೇರಿದಂತೆ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪರೀಕ್ಷಾ ಅಕ್ರಮ ಹಾಗೂ ಮಾರ್ಕ್ಸ್ ಕಾರ್ಡ್ ಹಗರಣ ದಂಧೆ ವಿಚಾರವಾಗಿ ಅಪಖ್ಯಾತಿ ಪಡೆದಿರುವ ವಿವಿ ಮೇಲೆ ಇದೀಗ ಲೋಕಾಯುಕ್ತ ರೇಡ್ ನಡೆದಿದ್ದು, ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.




