ತುರುವೇಕೆರೆ: ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದರೆ ಜನರು ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರು ನೀಡುವ ಪ್ರಮೇಯವೇ ಉದ್ಭವವಾಗುವುದಿಲ್ಲ. ಜನರ ಕೆಲಸ ಮಾಡಿಕೊಡಲು ಅಧಿಕಾರಿಗಳು ಹಣಕ್ಕೆ ಒತ್ತಾಯಿಸಿದರೆ ಕ್ರಮ ಖಚಿತ ಎಂದು ಲೋಕಾಯುಕ್ತ ಎಸ್ಪಿ ಬಿ.ಬಿ. ಲಕ್ಷ್ಮೀನಾರಾಯಣ್ ಎಚ್ಚರಿಸಿದರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲನ್ನು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಮರೆಯಬಾರದು. ಅಧಿಕಾರವಿರುವುದು ಜನರ ಸೇವೆ ಮಾಡುವುದಕ್ಕಾಗಿಯೇ ವಿನಃ ಜನರನ್ನು ಕೆಲಸ ಕಾರ್ಯಗಳಿಗೆ ಕಛೇರಿಗೆ ಹತ್ತಾರು ಬಾರಿ ಅಲೆಸುವುದಕ್ಕಲ್ಲ ಎಂದರು. ಗ್ರಾಮೀಣ ಭಾಗದಿಂದಲೇ ಹೆಚ್ಚು ದೂರುಗಳು ಲೋಕಾಯುಕ್ತಕ್ಕೆ ಬರುತ್ತಿವೆ. ಅಲ್ಲಿನ ಜನರ ಸಮಸ್ಯೆಗಳು ಹೆಚ್ಚಿವೆ. ಇದಕ್ಕೆ ಕಾರಣ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜನರಿಗೆ ಸ್ಪಂದಿಸದಿರುವುದು, ಅವರ ಸಮಸ್ಯೆಗಳನ್ನು ಪರಿಹರಿಸದಿರುವುದು ಎಂದ ಅವರು, ಅಧಿಕಾರಿಗಳು ಯಾವುದೋ ಉದ್ದೇಶಕ್ಕಾಗಿ ಕೆಲಸ ವಿಳಂಬ ಮಾಡಬಾರದು. ಜನರ ಕೆಲಸವನ್ನು ಶೀಘ್ರ ಮಾಡಿಕೊಟ್ಟರೆ ಅವರೇಕೆ ನಿಮ್ಮ ವಿರುದ್ಧ ದೂರು ಹಿಡಿದು ನಮ್ಮ ಬಳಿ ಬರುತ್ತಾರೆ ಎಂದು ಪ್ರಶ್ನಿಸಿದರು.
ಎಲ್ಲಾ ಸಮಸ್ಯೆಗಳಿಗೂ ಲೋಕಾಯುಕ್ತಕ್ಕೆ ದೂರು ನೀಡಿದರೆ ಪರಿಹಾರವಾಗುವುದಿಲ್ಲ. ಸರ್ಕಾರಿ ಕಛೇರಿಯಲ್ಲಿ ಅವ್ಯವಹಾರ, ಅಧಿಕಾರಿಗಳಿಂದ ಲಂಚದ ಆಮಿಷ, ಕಾಮಗಾರಿಗಳಲ್ಲಿ ಹಗರಣಗಳು, ಸರ್ಕಾರಿ ಹಣ ದುರುಪಯೋಗ ಇಂತಹ ದೂರುಗಳಿದ್ದರೆ ನಾವು ಬಂದಾಗಲೇ ಸಾರ್ವಜನಿಕರು ದೂರು ನೀಡಬೇಕೆಂದೇನಿಲ್ಲ, ನೇರವಾಗಿ ನಮ್ಮ ಕಛೇರಿಗೆ ಬಂದು ನಿಮಗೆ ತಿಳಿದಷ್ಟು ದೂರು ನೀಡಬಹುದು. ಅಧಿಕಾರಿಗಳು ಕೆಲಸ ಮಾಡಿಕೊಡುವುದಕ್ಕೆ ಹಣ ಕೇಳುತ್ತಾರೆಂಬ ಬಗ್ಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಬರುತ್ತಿವೆ, ಅಧಿಕಾರಿಗಳು, ನೌಕರರು ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯಕ್ಕಿಂತ ನಾವು ದೊಡ್ಡವರಲ್ಲ. ಜಮೀನು, ರಸ್ತೆ ವಿವಾದಗಳನ್ನು ಸ್ಥಳೀಯವಾಗಿ ತಹಸೀಲ್ದಾರ್, ಇಒ, ಪಪಂ ಮುಖ್ಯಾಧಿಕಾರಿ ಬಳಿ ದೂರು ನೀಡಿ ಪರಿಹರಿಸಿಕೊಳ್ಳಿ. ಅಂತಹ ದೂರುಗಳೇ ಇಂದು ಹೆಚ್ಚು ಲೋಕಾಯುಕ್ತಕ್ಕೆ ಬರುತ್ತಿದೆ. ಸ್ಥಳೀಯವಾಗಿ ಪರಿಹಾರ ಸಿಗದಿದ್ದರೆ ಮಾತ್ರ ಲೋಕಾಯುಕ್ತಕ್ಕೆ ದೂರು ನೀಡಿ ಎಂದರು.
ನಮ್ಮ ತಂದೆ ಮೃತರಾಗಿದ್ದು, ಫವತಿ ಖಾತೆ ಮಾಡಿಕೊಡಲು 2025 ರ ಜನವರಿ 21 ರಂದು ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಕೊಂಡಜ್ಜಿ ಗ್ರಾಪಂ ಪಿಡಿಒ, ಅಧಿಕಾರಿಗಳು ಇ-ಖಾತಾ ಮಾಡಿಕೊಟ್ಟಿಲ್ಲ, ಯಾರೋ ತಕರಾರು ಅರ್ಜಿ ಸಲ್ಲಿಸಿರುವುದನ್ನೇ ನೆಪ ಹೇಳಿ ಫವತಿ ಖಾತೆ ಮಾಡಿಕೊಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಕೊಂಡಜ್ಜಿಯ ರಾಕೇಶ್ ಎಂಬುವವರು ದೂರು ನೀಡಿದರು. ಫವತಿ ಖಾತೆಯಡಿ ಪುತ್ರನಿಗೆ ಆಸ್ತಿ ಹಕ್ಕನ್ನು ವರ್ಗಾಯಿಸಿ ಇ-ಖಾತಾ ಮಾಡಿಕೊಡುವುದಕ್ಕೆ ಎರಡು ತಿಂಗಳ ಅಗತ್ಯತೆ ಏನಿದೆ? ತಕರಾರು ಅರ್ಜಿಯ ನೆಪ ಮಾಡಿಕೊಂಡು ಅಥವಾ ಇನ್ನಾವುದೋ ಉದ್ದೇಶಕ್ಕೆ ಫವತಿ ಅನ್ವಯ ಇ-ಖಾತೆ ಮಾಡಿಕೊಡುವುದಕ್ಕೆ ಸತಾಯಿಸುತ್ತಿರುವುದು ಸರಿಯಲ್ಲ, ಕೂಡಲೇ ಇ-ಖಾತಾ ಮಾಡಿಕೊಡಬೇಕೆಂದು ಕೊಂಡಜ್ಜಿ ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ಲೋಕಾಯುಕ್ತ ಎಸ್ಪಿ ಸೂಚಿಸಿದರು.
ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದ ಸಾಕಷ್ಟು ದೂರುಗಳು ಹಾಗೂ ಪಟ್ಟಣದ ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಸಾರ್ವಜನಿಕರಿಂದ ಸುಮಾರು 28 ಅರ್ಜಿಗಳು ವಿವಿಧ ಇಲಾಖೆಗೆ ಸಂಬಂಧಿಸಿದ ದೂರುಗಳು ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದರು. ಲೋಕಾಯುಕ್ತ ಡಿಎಸ್ಪಿ ವೆಂಕಟೇಶ್, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಶಿವರುದ್ರಪ್ಪ ಮೇಟಿ, ಟಿ.ರಾಜು, ತಹಸೀಲ್ದಾರ್ ಕುಂಞ ಅಹಮದ್, ಇಒ ಶಿವರಾಜಯ್ಯ, ಸಿಪಿಐ ಲೋಹಿತ್, ಲೋಕಾಯುಕ್ತ ಸಿಬ್ಬಂದಿಗಳಾದ ಗಿರೀಶ್, ನಳಿನ, ಪ್ರಕಾಶ್, ಕರಿಯಪ್ಪ, ಮಣಿಕಂಠ, ವಿವಿಧ ಇಲಾಖಾ ಅಧಿಕಾರಿಗಳು, ಗ್ರಾಪಂ ಪಿಡಿಒ, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ