ಬೆಳಗಾವಿ:-ಮಂಗಳವಾರ ಬೆಳಿಗ್ಗೆ ಲೋಕಾಯುಕ್ತರು ದಾಳಿ ನಡೆಸಿದ ಮೂವರ ಮನೆಗಳಲ್ಲೂ ಕಂತೆಕಂತೆ ನೋಟುಗಳ ರಾಶಿ, ಅಪಾರ ಪ್ರಮಾಣದ ಚಿನ್ನಾಭರಣಗಳು, ಅಗತ್ಯ ದಾಖಲೆಗಳು ಹಾಗೂ ದಾಖಲೆಗಳಿಲ್ಲದ ಸ್ವತ್ತುಗಳನ್ನು ವಶಕ್ಕೆ ಪಡೆದರು.
ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಢವಳೇಶ್ವರ ಅವರ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿ ನಾಲ್ಕು ಕಡೆ ದಾಳಿ ಮಾಡಲಾಗಿದೆ. ಒಂದು ವಾಸದ ಮನೆ, 4 ಎಕರೆ ಕೃಷಿ ಜಮೀನು ಎಲ್ಲ ಸೇರಿ ಒಟ್ಟು ಮೌಲ್ಯ ₹1.05 ಕೋಟಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ₹1.55 ಲಕ್ಷ ನಗದು, ₹3.02 ಲಕ್ಷ ಮೌಲ್ಯದ ಚಿನ್ನಾಭರಣ, ₹3.45 ಲಕ್ಷ ಬೆಲೆ ಬಾಳುವ ವಾಹನಗಳು ಸೇರಿ ಒಟ್ಟು ಮೌಲ್ಯ ₹8.02 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವೇಳೆ ವಿಠ್ಠಲ ಸಿಕ್ಕಿಬಿದ್ದಿದ್ದರು. ಅವರ ಬಳಿ ದಾಖಲೆ ಇಲ್ಲದ ₹1.10 ಕೋಟಿ ಹಣ ಪತ್ತೆಯಾಗುತ್ತು. ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ ಮಾಡಿ ಈ ಹಣ ವಶಕ್ಕೆ ಪಡೆದಿದ್ದರು.
ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಧಾರವಾಡದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಹಣಮಂತಪ್ಪ ಭಜಂತ್ರಿ ಅವರಿಗೆ ಸೇರಿದ ಉಗರಗೋಳದ ಫಾರ್ಮ್‌ಹೌಸ್‌ನಲ್ಲಿ ಈ ಕಂತೆಕಂತೆ ಹಣ ಪತ್ತೆಯಾಗಿದೆ. ₹500 ಮುಖಬೆಲೆಯ ಒಟ್ಟು ₹49 ಲಕ್ಷ ನೋಟುಗಳು ಸಿಕ್ಕಿವೆ. ಉಳಿದಂತೆ, ₹1.85 ಲಕ್ಷ ಮೌಲ್ಯದ ಸ್ಥಿರಾಸ್ತಿ, ₹94.22 ಲಕ್ಷ ಮೌಲ್ಯದ ಚರಾಸ್ತಿಗಳು ಏಳು ಸ್ಥಳಗಳಲ್ಲಿ ಪತ್ತೆಯಾಗಿವೆ.
ಇನ್ನೊಂದೆಡೆ, ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಐಶಾರಾಮಿ ಮನೆ ಖರೀದಿಸಿದ್ದಾರೆ. ಇವರಿಗೆ ಸೇರಿದ ಒಟ್ಟು ಐದು ಕಡೆ ದಾಳಿ ಮಾಡಿದ್ದು, ಒಟ್ಟು ₹1.63 ಲಕ್ಷ ಸ್ಥಿರಾಸ್ತಿ, ₹58.43 ಲಕ್ಷ ಚರಾಸ್ತಿಗಳು ಪತ್ತೆಯಾಗಿವೆ. ಎರಡೂ ಸೇರಿ ₹2.21 ಕೋಟಿಯ ಆಸ್ತಿ ಹೊಂದಿದ್ದಾರೆ.ಬೆಳಗಾವಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಹಣಮಂತರಾಯ ನೇತೃತ್ವದಲ್ಲಿ ಎಲ್ಲ ಕಡೆ ದಾಳಿ ಮಾಡಲಾಯಿತು.
ವರದಿ :-ರಾಜು ಮುಂಡೆ