ಪುಣೆ, ಮಹಾರಾಷ್ಟ್ರ: ಬಾಳ ಮುಸ್ಸಂಜೆಯಲ್ಲಿರುವ ಹಾಗೂ ಹೆಂಡತಿಯನ್ನು ಕಳೆದುಕೊಂಡ ವೃದ್ಧರು, ಪತಿಯನ್ನು ಕಳೆದುಕೊಂಡ ವೃದ್ಧೆಯರಿಗೆ ಆಗುವ ಒಂಟಿತನ, ಏಕಾಂತ, ನಿರಾಸೆಗಳನ್ನು ಹೋಗಲಾಡಿಸಲು ಸಂಸ್ಥೆಯೊಂದು ನಿರಂತರ ಕಾರ್ಯೋನ್ಮುಖವಾಗಿದೆ.
ಇದಕ್ಕೆ ಪೂರಕ ಎಂಬಂತೆ, ಜೀವನ ಸಂಗಾತಿ ಅಗಲಿಕೆ ಬಳಿಕ ಬಾಳ ಮುಸ್ಸಂಜೆಯಲ್ಲಿ ಏಕಾಂಗಿತನದಲ್ಲಿದ್ದ ಆಸ್ವರಿ ಕುಲಕರ್ಣಿ ಮತ್ತು ಅನಿಲ್ ಯಾರ್ಡಿ ಇದೀಗ ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಇದಕ್ಕೆ ವೇದಿಕೆಯಾಗಿರುವುದು ಹ್ಯಾಪಿ ಸೀನಿಯರ್ಸ್ ಸಂಸ್ಥೆ. ಈ ಸಂಸ್ಥೆಯ ಮುಖ್ಯ ಉದ್ದೇಶವೇ ಸಂಗಾತಿಯ ಆಸರೆ ಬಯಸುವ ಹಿರಿಯ ಜೀವಗಳನ್ನು ಮರು ಮದುವೆಯ ಮೂಲಕ ಅಥವಾ ಲಿವ್ ಇನ್ ರಿಲೇಷನ್ಶಿಪ್ ಮೂಲಕ ಒಂದು ಮಾಡುವುದೇ ಆಗಿದೆ.
ಅವರಿಗೆ ಇವರು, ಇವರಿಗೆ ಅವರು ಆಸರೆ: ಇದೇ ವೇದಿಕೆ ಮೂಲಕ ಅನಿಲ್ ಮತ್ತು ಆಸ್ಬರಿ ಇದೀಗ ಜೊತೆಯಾಗಿದ್ದಾರೆ. ಮರು ಮದುವೆಯಾಗಲೂ ಯೋಚಿಸಿದರೂ ಸಹ ಜೀವನ ಅದಕ್ಕಿಂತ ಸೂಕ್ತ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಒಟ್ಟಿಗೆ ಬದುಕ ಬಂಡಿ ಎಳೆಯಲು ಆಸರೆಯಾಗಿದ್ದಾರೆ.
ಒಂಟಿಯಾಗಿದ್ದವರು ಜಂಟಿಯಾಗಿದ್ದರ ಬಗ್ಗೆ ಹೀಗಿದೆ ಪ್ರತಿಕ್ರಿಯೆ: ಈ ಕುರಿತು ಮಾತನಾಡಿರುವ ಆಸ್ಬರಿ ನಾನು ಈ ವಯಸ್ಸಿನಲ್ಲಿ ಮರು ಮದುವೆಯಾಗುವುದರ ಬಗ್ಗೆ ಸ್ಪಷ್ಟವಾಗಿ ನಿಲುವು ತಳೆದಿರಲಿಲ್ಲ. ಆದರೆ, ಅನಿಲ್ ಅವರನ್ನ ಕಳೆದ ವರ್ಷ ಭೇಟಿಯಾದ ಬಳಿಕ ಹಾಗೂ ಅವರೊಂದಿಗೆ 10 ತಿಂಗಳ ಒಡನಾಟದ ಬಳಿಕ ಇದೀಗ ಒಟ್ಟಿಗೆ ಸಹ ಜೀವನ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ತಮ್ಮವರಿಲ್ಲ ಎಂಬ ಚಿಂತೆಯಲ್ಲಿದ್ದವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ: ಇಳಿ ವಯಸ್ಸಿನಲ್ಲಿ ಸಂಗಾತಿ ಕಳೆದುಕೊಂಡು ಉದ್ಯೋಗ ಅರಸುತ್ತಾ ದೂರದ ಮಕ್ಕಳಿಂದ ಒಬ್ಬಂಟಿಯಾಗುವ ಹಿರಿಯರಿಗೆ ಈ ‘ಹ್ಯಾಪಿ ಸೀನಿಯರ್ಸ್’ ಸಂಸ್ಥೆ ಬೆಂಬಲ ನೀಡುತ್ತಿದೆ. ಅವರಿಗೆ ತಮ್ಮವರೊಬ್ಬರು ತಮ್ಮ ಜೊತೆಯಲ್ಲಿದ್ದಾರೆ ಎಂಬ ನಿಟ್ಟುಸಿರು ಬಿಡಲು ಹೊಸ ಸಂಗಾತಿ ಹುಡುಕಾಟಕ್ಕೆ ನೆರವನ್ನು ನೀಡುತ್ತದೆ.
90 ಜನರಿಗೆ ಮರು ಮದುವೆ ಮಾಡಿ ಬದುಕು ರೂಪಿಸಿದ ಸಂಸ್ಥೆ: ಸಂಸ್ಥೆಯ ಸ್ಥಾಪಕ ಮಾಧವ್ ದಾಮ್ಲೆ ಮಾತನಾಡಿ, ಸಂಸ್ಥೆಯಿಂದ ಇದುವರೆಗೆ 90 ಮರು ಮದುವೆ ಮಾಡಲಾಗಿದೆ. ಅನೇಕರು ಲೀವ್ ಇನ್ ರಿಲೇಷನ್ಶಿಪ್ ಆಯ್ಕೆ ಮಾಡಿಕೊಂಡಿದ್ದಾರೆ. 12 ವರ್ಷಗಳ ಕಾಲ ಹಿರಿಯ ನಾಗರಿಕರೊಂದಿಗೆ ಕೆಲಸ ಮಾಡಿದ ಬಳಿಕ ತಮಗೆ ಈ ಯೋಚನೆ ಬಂದಿತು. ವಯಸ್ಸಾದ ಪುರುಷರು ಮತ್ತು ಮಹಿಳೆಯರು ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಅವರೊಳಗೆಯೇ ಹೋರಾಡುತ್ತಿರುತ್ತಾರೆ. ಇಂತಹವರಿಗಾಗಿ ಈ ಯೋಜನೆ ನೆರವು ನೀಡಿದೆ ಎನ್ನುತ್ತಾರೆ ಅವರು.
ವರ್ಷಗಳ ಹಿಂದೆ ನಾನು ಹಿರಿಯರಿಗಾಗಿ ಆಶ್ರಮ ನಡೆಸುತ್ತಿದ್ದೆ. ಅಲ್ಲಿ ಒಬ್ಬರು ತಮ್ಮ ಮಗನೊಂದಿಗೆ ಜಗಳವಾಡಿ ತಮ್ಮ ಜೀವನ ಅಂತ್ಯಗೊಳಿಸಲು ಮುಂದಾಗಿದ್ದರು. ಮಗನನ್ನು ಸಂಪರ್ಕಿಸಿದಾಗ ಆತ ಯಾವುದೇ ನೆರವಿಗೆ ಮುಂದಾಗಲಿಲ್ಲ. ಈ ವೇಳೆ, ಹಿರಿಯ ನಾಗರಿಕರು ಹೇಗೆ ತಮ್ಮ ಬದುಕನ್ನು ಕಳೆಯುತ್ತಿದ್ದಾರೆ ಎಂಬುದು ನನ್ನ ಅರಿವಿಗೆ ಬಂತು. ಇದರಿಂದಾಗಿ ಅವರು ತಮ್ಮ ಕೊನೆಗಾಲದಲ್ಲಿ ಒಬ್ಬಂಟಿಯಾಗಿ ಇರಬಾರದು ಎಂಬ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾಗಿ ದಾಮ್ಲೆ ಈ ಚಿಂತನೆ ಹಿಂದಿನ ರಹಸ್ಯವನ್ನ ಬಿಚ್ಚಿಟ್ಟರು.




