ಸೋಮವಾರ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರು ವಿಕೆಟ್ಗಳ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ (LSG) ಐಪಿಎಲ್ 2025 ಆವೃತ್ತಿಯ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅವರ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 205 ರನ್ ಕರೆಹಾಕಿದರೂ, ತಂಡವನ್ನು ಸೋಲಿನ ಸುಳಿಯಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಈ ಫಲಿತಾಂಶವು LSG ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನಕ್ಕೆ ಇಳಿದಿದೆ. ಈ ಮೂಲಕ ಅಧಿಕೃತವಾಗಿ ಪ್ಲೇಆಫ್ನಿಂದ ಹೊರಬಿದ್ದಿದೆ.

ಈ ಪಂದ್ಯವನ್ನು ಗೆದ್ದಿದ್ದರೆ ಪ್ಲೇಆಫ್ ತಲುಪಲು ಎಲ್ಎಸ್ಜಿಗೆ ಒಂದು ಅವಕಾಶವಿರುತ್ತಿತ್ತು. ಪಂದ್ಯದ ವೇಳೆ ಡಗೌಟ್ನಲ್ಲಿ ಕುಳಿತಿದ್ದವರಿಗೆ ಟೆನ್ಶನ್ ಮನೆ ಮಾಡಿತ್ತು. ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಖರೀದಿಸಲಾದ ರಿಷಭ್ ಪಂತ್ ಆ ಆವೃತ್ತಿಯಲ್ಲಿ ಕಳಪೆ ಫಾರ್ಮ್ನಲ್ಲಿದ್ದು, ಈ ಪಂದ್ಯದಲ್ಲಿಯೂ ನಿರಾಶಾದಾಯಕ ಪ್ರದರ್ಶನ ನೀಡಿದರು. ಪಂತ್ ಔಟ್ ಆಗುತ್ತಿದ್ದಂತೆ ಮಾಲೀಕ ಸಂಜೀವ್ ಗೋಯೆಂಕಾ ನಿರಾಶೆವ್ಯಕ್ತಪಡಿಸಿದರು. ಈ ಆವೃತ್ತಿಗೆ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ₹27 ಕೋಟಿಗೆ ಖರೀದಿಸಲಾಗಿತ್ತು. ಪಂತ್ ಈವರೆಗೆ 11 ಇನಿಂಗ್ಸ್ಗಳಲ್ಲಿ ಕೇವಲ 135 ರನ್ಗಳನ್ನು ಗಳಿಸಿದ್ದಾರೆ. ಈ ಪೈಕಿ 63 ರನ್ಗಳು ಒಂದು ಇನಿಂಗ್ಸ್ನಲ್ಲಿ ಬಂದಿವೆ.
115 ರನ್ಗಳ ಉತ್ತಮ ಆರಂಭಿಕ ಜೊತೆಯಾಟದ ನಂತರ ಬಂದ ಪಂತ್ ಅವರು ಶೀಘ್ರವೇ ಔಟ್ ಆದಾಗ, ಪಂದ್ಯದ ಮಧ್ಯದಲ್ಲಿಯೇ ಗೋಯೆಂಕಾ ಸ್ಟ್ಯಾಂಡ್ಗಳಿಂದ ಹೊರಗೆ ಬಂದು, ಡ್ರೆಸ್ಸಿಂಗ್ ಕೋಣೆಗೆ ನಡೆದರು ಮತ್ತು ನಿರಾಶೆಗೊಂಡರು. ಆದಾಗ್ಯೂ, ಸನ್ರೈಸರ್ಸ್ ವಿರುದ್ಧ ಎಲ್ಎಸ್ಜಿ ಸೋತ ನಂತರ, ಗೋಯೆಂಕಾ ಪ್ರತಿ ಪಂದ್ಯದ ನಂತರದಂತೆಯೇ ಆಟಗಾರರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು.




