ಕೊಪ್ಪಳ : ಶೀಘ್ರದಲ್ಲಿ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶಾಲಾ-ಕಾಲೇಜುಗಳ ನಿರ್ಮಾಣವಲ್ಲದೆ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಕೊಪ್ಪಳದ ಕುಕನೂರ್ ತಾಲೂಕಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿಕ್ಷಣ ಇಲಾಖೆ ಸಚಿವನಾದ ವೇಳೆ 53 ಸಾವಿರ ಶಿಕ್ಷಕರ ಕೊರತೆಯಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳೊಳಗೆ 12,000 ಶಿಕ್ಷಕರ ನೇಮಕಾತಿ ಮಾಡಿದೆ. ಈಗ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಇಂದು ಅವರು, ಕುಕನೂರು ತಾಲೂಕಿನ ಕೋಮಲಾಪೂರ ಗ್ರಾಮದಲ್ಲಿ ಕೆಕೆಆರ್ಡಿಬಿ ಯೋಜನೆಯಡಿ ನಿರ್ಮಿಸಲಾದ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ 4,900 ಕಾಯಂ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡಿದೆ ಎಂದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಹೀಗಾಗಿ ಫಲಿತಾಂಶ ಕುಸಿದಿದೆ. ಮಕ್ಕಳ ಶಿಕ್ಷಣ ಸುಧಾರಿಸಲು ಇಂತಹ ಕ್ರಮ ಅಗತ್ಯ ಎಂದು ಪ್ರತಿಕ್ರಿಯಿಸಿದರು.