ಬೆಳಗಾವಿ : ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಪ್ರಶ್ಮೋತ್ತರ ಕಲಾಪದ ವೇಳೆ ಬಿಜೆಪಿ ಸ್ಸದಸ್ಯ ಚಿದಾನಂದಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಯಾವುದೇ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದಿದ್ದಾರೆ.
ಕೆಪಿಎಸ್ ಶಾಲೆಗಳ ಅಭಿವೃದ್ಧಿ ಕೇವಲ ಪೇಪರ್ ಗಳ ಮೇಲಿದೆ. ಇಂದಿನ ಶಿಕ್ಷಣ ವ್ಯವಸ್ಥೆಯನ್ನೇ ಶಿಕ್ಷಣ ಸಚಿವರು ಬುಡಮೇಲು ಮಾಡಲು ಹೊರಟಂತಿದೆ. ಗ್ರಾಮ ಪಂಚಾಯಿತಿಗೆ ಒಂದು ಶಾಲೆಯಂತೆ ಮಾಡಿ ಸರ್ಕಾರ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ನಡೆಸಿದೆ. ಕೆಪಿಎಸ್ ಶಾಲೆಗಳನ್ನು 6ರಿಂದ 12ನೇ ತರಗತಿಗೆ ಮಾಡಿ ಎಂದು ಸದಸ್ಯ ಚಿದಾನಂದಗೌಡ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ನಾನು ಯಾವುದೇ ಶಾಲೆ ಮುಚ್ಚಲು ಹೊರಟಿಲ್ಲ. ಕೆಪಿಎಸ್ ಶಾಲೆಗಳಲ್ಲಿ ಸ್ಕೂಲ್ ವ್ಯಾನ್ ಕೊಡ್ತೀವಿ. 6-12ನೇ ತರಗತ್ವರೆಗೆ ಮಾತ್ರ ಕೆಪಿಎಸ್ ಶಾಲೆ ಮಾಡಲು ಆಗಲ್ಲ. ಉತ್ತಮವಾಗಿರುವ ಕಡೆ ಕೆಪಿಎಸ್ ಶಾಲೆ ಮಾಡುತ್ತಿದ್ದೇವೆ.
ಕನ್ನಡ ಶಾಲೆಯನ್ನು ನಾವು ಮುಚ್ಚುತ್ತೇವೆ ಎಂದು ನಾನು ಹೇಳಿಲ್ಲ. ಕನ್ನಡ ನಮ್ಮ ರಕ್ತದಲ್ಲಿದೆ. ಮಕ್ಕಳು ಶಾಲೆಗೆ ಬರುವುದಾದರೆ ಹೊಸ ಶಾಲೆಯನ್ನು ಕೊಡುತ್ತೇವೆ. ಒಂದು ಮಗು ಇದ್ದರೂ ಒಬ್ಬ ಶಿಕ್ಷಕರು ಇರುತ್ತಾರೆ. ನಮ್ಮ ಸರ್ಕಾರ ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.




