ಸಿರುಗುಪ್ಪ : –ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಹಯೋಗದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ನಿಮಿತ್ತ ನಡೆದ ಶೋಭಾಯಾತ್ರೆ ನಡೆಯಿತು.
11ನೇ ದಿನದಲ್ಲಿ ರಾಜಬೀದಿಗಳಲ್ಲಿ ಅದ್ದೂರಿಯಾಗಿ ನಡೆದ ಮೆರವಣಿಗೆಯಲ್ಲಿ ಕೇಸರಿ ಧ್ವಜ ತಿರುಗಿಸಿ ಭಕ್ತಿಗೀತೆ, ಜಾನಪದ, ಸಿನಿಮಾ ಹಾಡುಗಳಿಗೆ ಯುವಕರು ಕುಣಿದು ಸಂಭ್ರಮಿಸಿದರು.
ಶ್ರೀ ಆಂಜನೇಯ್ಯಸ್ವಾಮಿ, ಶಿವ, ವಿಷ್ಣು, ರಾಕ್ಷಸ ಸೇರಿದಂತೆ ವಿವಿಧ ವೇಷಧಾರಿಗಳು ಭಾಗವಹಿಸಿ ಮರೆಯಾಗುತ್ತಿರುವ ಕಲೆಗೆ ಮರುಜೀವ ತುಂಬಿದರು.ಸಾಹಸ ಪ್ರತಿಭೆಯ ಮಲ್ಲಕಂಬ, ಡೊಳ್ಳುಕುಣಿತ, ಚಂಡಿವಾದ್ಯ ಕಂಸಾಳೆ ಕಲರವ ಇನ್ನಿತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ಮನರಂಜಿಸಿದವು.
ಸಂಭ್ರಮಾಚರಣೆ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿದ್ದು, ಎಲ್ಲರಿಗೂ ಹಿಂದೂಪರ ಸಂಘಟನೆಗಳಿಂದ ಪ್ರಸಾದ ವ್ಯವಸ್ಥೆ, ಮಜ್ಜಿಗೆ ವಿತರಣೆ, ನೀರು ಇನ್ನಿತರ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು.
ಯಾವುದೇ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಗಾಂಧೀಜಿ ವೃತ್ತ, ದೇಶನೂರು ರಸ್ತೆ ಸೇರಿದಂತೆ ಇನ್ನಿತರೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಜನದಟ್ಟಣೆಯ ಮದ್ಯದಲ್ಲೂ ಟ್ರಾಪಿಕ್ ಪೋಲೀಸರಿಂದ ಪರ್ಯಾಯ ರಸ್ತೆ ಸಂಪರ್ಕದಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು.
ಮಹಿಳೆಯರು, ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ, ಮೇಲೆತ್ತರದಲ್ಲಿ ನಿಂತು ಉತ್ಸವ ಮಹಾಗಣಪತಿಗೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ನಮಿಸಿ ವಿಸರ್ಜನೆಯ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಮದ್ಯಾಹ್ನ ಆರಂಭವಾದ ಶೋಭಯಾತ್ರೆ ಸಂಜೆಯವರೆಗೂ ಜರುಗಿದ್ದು, ನಂತರ ದೇಶನೂರು ರಸ್ತೆಯಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಹತ್ತಿರ ತುಂಗಾಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.ಎಸ್.ಪಿ ಡಾ.ಶೋಭರಾಣಿ .ವಿ.ಜೆ, ನಗರದಲ್ಲಿ ಖುದ್ದಾಗಿ ಹಾಜರಿದ್ದು ಭದ್ರತೆಯ ನೇತೃತ್ವ ವಹಿಸಿದ್ದರು.
ವರದಿ : ಶ್ರೀನಿವಾಸ ನಾಯ್ಕ