ಬೆಂಗಳೂರು : ಜಾತಿಗಣತಿ ವರದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಏ 17 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು.
ವರದಿ ನೋಡಿದ ಬಳಿಕ ಪ್ರತಿಕ್ರಿಯೆ ನೀಡಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿಯನ್ನು ಮಂಡಿಸಿದ್ದರು.
ಜಾತಿಗಣತಿ ಜಾರಿಗೆ ಬಿಜೆಪಿ, ಜೆಡಿಎಸ್ ಮಾತ್ರವಲ್ಲದೇ ಹಲವಾರು ಕಾಂಗ್ರೆಸ್ ಮುಖಂಡರಿಂದಲೂ ವಿರೋಧ ವ್ಯಕ್ತವಾಗಿದೆ. 190 ಕೋಟಿ ರೂ. ಪೋಲು ಮಾಡಿ ಅವೈಜ್ಞಾನಿಕವಾಗಿ ಈ ವರದಿ ಸಿದ್ದಪಡಿಸಲಾಗಿದೆ. ಈ ವರದಿ ಈಗಾಗಲೇ ಸೋರಿಕೆಯಾಗಿ ತನ್ನ ಪಾವಿತ್ರ್ಯತೆ ಕಳೆದುಕೊಂಡಿದೆ. ವರದಿಯನ್ನು ಮನೆಮನೆಗೆ ತೆರಳಿ ಸಿದ್ದಪಡಿಸಿಲ್ಲ ಎಂಬ ಆರೋಪಗಳು ಕೇಳಬಂದಿದೆ.