ಅಥಣಿ: ವಿಧಾನಸಭಾ ಚುನಾವಣೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಶಾಸಕ ಲಕ್ಷ್ಮಣ ಸವದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಗಳಗಳನೆ ಕಣ್ಣೀರಿಟ್ಟಿದ್ದಾರೆ. ಈ ಆರೋಪವನ್ನು ತೀವ್ರವಾಗಿ ಖಂಡಿಸಿರುವ ಮಂಗಸೂಳಿ, ಸವದಿಗೆ ಭಾವನಾತ್ಮಕ ಸವಾಲೆಸೆದಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಬಣದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಗಜಾನನ ಮಂಗಸೂಳಿ, ಕ್ಷೇತ್ರದಲ್ಲಿ ಗಣನೀಯ ಬೆಂಬಲ ಹೊಂದಿದ್ದರು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪ್ರಮುಖರ ಪಟ್ಟಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು.
ಆದರೆ, ರಾಜಕೀಯ ಬೆಳವಣಿಗೆಗಳ ನಂತರ ಹಾಲಿ ಶಾಸಕ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಟಿಕೆಟ್ ಅಂತಿಮಗೊಂಡಿತ್ತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ಮಂಗಸೂಳಿ ಅವರಿಗೆ, ಸಂಧಾನ ಪ್ರಕ್ರಿಯೆಯ ಭಾಗವಾಗಿ ಕ್ಯಾಬಿನೆಟ್ ದರ್ಜೆಯ ಯಾವುದಾದರೂ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಅವರು ನೆನಪಿಸಿಕೊಂಡರು.
ಚುನಾವಣೆ ನಂತರ ಪಕ್ಷದಲ್ಲಿ ತಮ್ಮನ್ನು ಬಹಳಷ್ಟು ಕಡೆಗಣಿಸಲಾಗಿದೆ ಎಂದು ಮಂಗಸೂಳಿ ಆರೋಪಿಸಿದ್ದಾರೆ. ಇದೇ ವಿಷಯವನ್ನು ಹಂಚಿಕೊಳ್ಳುವಾಗ, ತಮ್ಮ ವಿರುದ್ಧ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಮಾಡಿರುವ ಶಾಸಕ ಲಕ್ಷ್ಮಣ ಸವದಿ, ತಮ್ಮ ಹೆಸರನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಾನು ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂಬುದು ನಿಜವಾಗಿದ್ದರೆ, ಲಕ್ಷ್ಮಣ ಸವದಿ ಅವರು ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲಿ” ಎಂದು ಕಣ್ಣೀರು ಹಾಕುತ್ತಾ ಭಾವನಾತ್ಮಕವಾಗಿ ಸವಾಲು ಹಾಕಿದ್ದಾರೆ.
ವರದಿ: ಅಜಯ ಕಾಂಬಳೆ




