ವಿವಾಹಿತ ಪುರುಷನೊಬ್ಬ ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧ ಹೊಂದುವುದು ಸಾಮಾಜಿಕವಾಗಿ ನೈತಿಕವಲ್ಲದಿರಬಹುದು, ಆದರೆ ಅದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಶಹಜಹಾನ್ಪುರದ ಪ್ರೇಮಿಗಳ ಪ್ರಕರಣದಲ್ಲಿ ದಂಪತಿಗೆ ರಕ್ಷಣೆ ನೀಡಿದ ನ್ಯಾಯಾಲಯ, ವಯಸ್ಕರ ವೈಯಕ್ತಿಕ ನಿರ್ಧಾರಗಳಲ್ಲಿ ಕಾನೂನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಾರಿದೆ.
ವಿವಾಹಿತ ಪುರುಷನೋರ್ವ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ‘ಲೈವ್-ಇನ್’ ಸಂಬಂಧದಲ್ಲಿದ್ದರೆ, ಆತನನ್ನು ಯಾವುದೇ ಕ್ರಿಮಿನಲ್ ಅಪರಾಧದ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅಥವಾ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಶಹಜಹಾನ್ಪುರದ ಅನಾಮಿಕಾ ಮತ್ತು ನೇತ್ರಪಾಲ್ ಎಂಬ ದಂಪತಿ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ.
“ಕಾನೂನು ಮತ್ತು ನೈತಿಕತೆ ಬೇರೆ ಬೇರೆ” ಎಂದು ಅಭಿಪ್ರಾಯಪಟ್ಟ ಪೀಠವು, ಸಾಮಾಜಿಕ ಅಭಿಪ್ರಾಯ ಅಥವಾ ನೈತಿಕತೆಯ ಆಧಾರದ ಮೇಲೆ ನಾಗರಿಕರ ಹಕ್ಕುಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.




