ತುರುವೇಕೆರೆ: ಸೇವೆಯಿಂದ ನಿವೃತ್ತರಾದ ಶಿಕ್ಷಕ ರಾಜು ಅವರನ್ನು ಶ್ರೀ ಮಾರುತಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಒಂದು ದಿನ ವಿಶ್ರಾಂತಿ ಪಡೆಯುವ ಸಂದರ್ಭ ಬಂದೇ ಬರುತ್ತದೆ. ಅದೇ ರೀತಿ ಉದ್ಯೋಗಸ್ಥರಿಗೆ ಸರ್ಕಾರದ ನಿಯಮದ ಪ್ರಕಾರ 60 ವರ್ಷಕ್ಕೆ ವಯೋನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ. ವೃತ್ತಿಯಲ್ಲಿದ್ದಾಗ ಎಷ್ಟರಮಟ್ಟಿಗೆ ಸೇವೆ ಸಲ್ಲಿಸಿದ್ದೇವೆಂಬದು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ರಾಜು ಅವರು ತಮ್ಮ ಸುದೀರ್ಘ ಶೈಕ್ಷಣಿಕ ಬದುಕಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಔದ್ಯೋಗಿಕ ಶಿಕ್ಷಣವನ್ನು ನೀಡಿದ್ದಾರೆ. ಅವರ ನಿವೃತ್ತಿಯ ನಂತರದ ಬದುಕು ಉತ್ತಮವಾಗಿರಲಿ, ಇಷ್ಟು ದಿನದ ಸಂಸ್ಥೆಯ ಒಡನಾಟ, ಸ್ನೇಹ ಮುಂದೆಯೂ ನಮ್ಮೊಂದಿಗೆ ಶಾಶ್ವತವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆಟಿಒ ರಾಜು, ಕಳೆದ ಮೂರು ದಶಕದಿಂದ ಈ ಸಂಸ್ಥೆಯ ಭಾಗವಾಗಿ ಆತ್ಮಸಾಕ್ಷಿ ಒಪ್ಪುವಂತೆ ಕಾರ್ಯನಿರ್ವಹಿಸಿದ್ದೇನೆ. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳು ನನ್ನ ಕರ್ತವ್ಯದಲ್ಲಿ ಬಹಳಷ್ಟು ಸಹಕಾರ ನೀಡಿದ್ದಾರೆ. ಕೆಲವು ವರ್ಷದ ಹಿಂದೆ ನನಗೆ ಅಪಘಾತವಾಗಿ ಅನಾರೋಗ್ಯಕ್ಕೆ ತುತ್ತಾದಾಗಲೂ ಸಂಸ್ಥೆ ಹಾಗೂ ಸಹೋದ್ಯೋಗಿಗಳು ನನಗೆ ಬೆಂಬಲವಾಗಿ ನಿಂತಿದ್ದಲ್ಲದೆ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೆಲ್ಲವನ್ನೂ ನಾನು ಜೀವನದಲ್ಲಿ ಮರೆಯುವಂತಿಲ್ಲ. ಸಂಸ್ಥೆಯೊಂದಿಗಿನ ಅವಿನಾಭಾವ ಸಂಬಂಧವನ್ನು ನಾನು ಹೊಂದಿದ್ದು, ಇಂದು ವಯೋನಿವೃತ್ತಿಯಿಂದ ಸಂಸ್ಥೆಯಿಂದ ಹೊರನಡೆಯಬೇಕಿದೆ. ಇದು ಬಹಳ ನೋವುಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಜೆ.ಟಿ.ಒ. ರಾಜು ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಲಾಯಿತು. ವಕೀಲರಾದ ಡಿ.ಟಿ.ರಾಜಶೇಖರ್, ಪ್ರಕಾಶ್, ಅರಳೀಕೆರೆ ಶಿವಕುಮಾರಸ್ವಾಮಿ, ಮಾಚೇನಹಳ್ಳಿ ಎಂ.ಬಿ.ಸಿದ್ದಬಸಪ್ಪ, ಮಾರುತಿ ಕೈಗಾರಿಕಾ ತರಬೇತಿ ಸಂಸ್ಥೆಯ ವರಮಹಾಲಕ್ಷ್ಮಮ್ಮ, ಹನುಮಂತಪ್ಪ, ಪ್ರಾಂಶುಪಾಲ ಗಿರೀಶ್, ಸಹೋದ್ಯೋಗಿಗಳಾದ ಸಿ.ವಿ.ಲತಾ, ಪ್ರಕಾಶ್, ಕೃಷ್ಣೇಗೌಡ, ಕುಮಾರ್ ಹಾಗೂ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್