Ad imageAd image

ವಿಶ್ವವಿಜಯ ವಿದ್ಯಾಶಾಲಾ ಪುಟಾಣಿಗಳ ನೃತ್ಯವೈಭವ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ: ಮಸಾಲಾ ಜಯರಾಮ್

Bharath Vaibhav
ವಿಶ್ವವಿಜಯ ವಿದ್ಯಾಶಾಲಾ ಪುಟಾಣಿಗಳ ನೃತ್ಯವೈಭವ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ: ಮಸಾಲಾ ಜಯರಾಮ್
WhatsApp Group Join Now
Telegram Group Join Now

ತುರುವೇಕೆರೆ: ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

ಪಟ್ಟಣದ ಮುತ್ತುರಾಯನಗರದಲ್ಲಿರುವ ರಿಯಾ ಪ್ಲೇಹೋಂ ಹಾಗೂ ವಿಶ್ವವಿಜಯ ವಿದ್ಯಾಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು, ಮಕ್ಕಳಲ್ಲಿನ ಸರ್ವಾಂಗೀಣ ಪ್ರಗತಿಗೆ ಶಾಲಾ ವಾರ್ಷಿಕೋತ್ಸವ, ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಅತ್ಯುತ್ತಮ ವೇದಿಕೆಯಾಗಬೇಕಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿದಾಗ ಮಾತ್ರ ಅವರ ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳ ಆಸಕ್ತಿ ಒಂದೆಡೆಯಾಗಿ, ನಿಮ್ಮ ಆಶಯ ಮತ್ತೊಂದಾದರೆ ಮಕ್ಕಳ ಭವಿಷ್ಯವೂ ಮಸುಕಾಗುತ್ತದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳ ಆಸಕ್ತಿಯ ಚಟುವಟಿಕೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಿದಾಗ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳಿಗೆ ಕೇವಲ ಪಠ್ಯದಲ್ಲಿನ ಶಿಕ್ಷಣ ಮಾತ್ರವಲ್ಲದೆ ಸಂಸ್ಕಾರ, ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಸಂಸ್ಕಾರವಿಲ್ಲದ ವಿದ್ಯೆ ನಿರರ್ಥಕವಾಗಲಿದೆ. ಈಗಿನ ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಒಲವನ್ನು ಹೊಂದಿದ್ದಾರೆ. ಇದರಿಂದ ಅನುಕೂಲವಾಗುವಷ್ಟೇ ಅನಾನುಕೂಲವೂ ಇದೆ. ಈ ಬಗ್ಗೆ ಮಕ್ಕಳ ಚಟುವಟಿಕೆ, ಚಲನವಲನದ ಬಗ್ಗೆ ಪೋಷಕರು ಗಮನಹರಿಸಬೇಕು. ಆಧುನಿಕ ತಂತ್ರಜ್ಞಾನದ ಬಳಕೆ ನಮ್ಮ ಯಶಸ್ಸಿಗೆ ಕಾರಣವಾಗಬೇಕೇ ವಿನಃ ನಮ್ಮ ಅವನತಿಗೆ ಕಾರಣವಾಗಬಾರದು. ಮಕ್ಕಳಲ್ಲಿ ನಮ್ಮ ಪಾರಂಪರಿಕ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳನ್ನು ತಿಳಿಸಿ ಅವರನ್ನು ಸಂಸ್ಕಾರವಂತ ನಾಗರೀಕರನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮದಾಗಿದೆ. ಗಳಿಕೆ, ಉದ್ಯೋಗ ಸಂಪಾದನೆಯಷ್ಟೇ ಜೀವನದ ಗುರಿಯಾಗಬಾರದು. ಅದನ್ನೂ ಮೀರಿ ಸಮಾಜದಲ್ಲಿ ಸತ್ಪ್ರಜೆಯಾಗಿ, ದೇಶಕ್ಕೆ ಕೊಡುಗೆಯನ್ನು ನೀಡುವಂತಹ ಸಾಧಕನಾಗುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ಬದುಕುವ ಶಕ್ತಿಯನ್ನು ಹಾಗೂ ಸಂಸ್ಕಾರ, ಮೌಲ್ಯಯುವ ಶಿಕ್ಷಣವನ್ನು ವಿಶ್ವವಿಜಯ ವಿದ್ಯಾಶಾಲೆ ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಸಮಾರಂಭದಲ್ಲಿ ಪುಟಾಣಿ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ನೃತ್ಯ ಮಾಡುವ ಮೂಲಕ ನೆರೆದಿದ್ದ ಪೋಷಕರು, ನಾಗರೀಕರನ್ನು ರಂಜಿಸಿದರು. ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲೆಯ ಅಧ್ಯಕ್ಷ ಹೆಚ್.ವಿ. ಪ್ರವೀಣ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ವಿಜಯಲಕ್ಷ್ಮೀ ವಿಶ್ವೇಶ್ವರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಪಪಂ ಮಾಜಿ ಅಧ್ಯಕ್ಷರಾದ ಸ್ವಪ್ನ ನಟೇಶ್, ಚಿದಾನಂದ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಇಂದಿರಾ ಪ್ರಭಾಕರ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಅಮರೇಶ್, ಮುಖಂಡರಾದ ಕಾಂತರಾಜು, ಸೋಮಶೇಖರ್, ವಿ.ಬಿ.ಸುರೇಶ್ ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!