ಅನುಪ್ಪುರ್: 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಸಂಜೆ 6 ಗಂಟೆಗೆ ಕಾಲೇಜಿನಿಂದ ಹಿಂತಿರುಗಿದ ಯುವತಿ ಆಟೋರಿಕ್ಷಾದಿಂದ ಇಳಿದು ತನ್ನ ಮನೆಗೆ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ರಾಜೇಂದ್ರಗ್ರಾಮ ಪೊಲೀಸ್ ಠಾಣೆ ಪ್ರಭಾರಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
ಮಾರ್ಗ ಮಧ್ಯದಲ್ಲಿ ಆರೋಪಿ ಹೇಮರಾಜ್ ಸಿಂಗ್ (23) ಆಕೆಯನ್ನು ತಡೆದಿದ್ದಾನೆ. ನಂತರ ಆತನ ಮೂವರು ಸಹಚರರು ಆಕೆಯನ್ನು ಸಮೀಪದ ಮರಗಳ ಹಿಂದೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೇಮರಾಜ್ ಸಿಂಗ್, ನೇಪಾಲ್ ಸಿಂಗ್ (20) ಜಿತೇಂದ್ರ ಸಿಂಗ್ (25) ಹಾಗೂ ಅಪ್ರಾಪ್ತ ವಯಸ್ಸಿನ ಆರೋಪಿಯೊಬ್ಬನನ್ನು ಬಂಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆಯಡಿ ಭಾರತೀಯ ನ್ಯಾಯ ಸಂಹಿತಾದಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿರೇಂದ್ರ ಕುಮಾರ್ ತಿಳಿಸಿದ್ದಾರೆ.