ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇತ್ತೀಚೆಗೆ ಸಂಭವಿಸಿದ/ಸಂಭವಿಸುತ್ತಿರುವ ಕೆಲ ಅನಾಹುತಗಳು, ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು, ಬಾಣಂತಿಯರ ಸರಣಿ ಸಾವು ಘಟನೆಗಳ ವಿಚಾರವಾಗಿ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ದುಷ್ಟ ಸಚಿವರುಗಳ ಹತ್ಯಾಕಾಂಡ ಮುಂದುವರೆಯುತ್ತಲೇ ಇದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಅವರ ಪೋಸ್ಟರ್ ಅನ್ನು ರಾಜ್ಯ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟಿಸಿದೆ.
ಅಧಿಕಾರಿಗಳ ಆತ್ಮಹತ್ಯೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣರಾಗಿದ್ದಾರೆ ಎಂಬಂತೆ ಪೋಸ್ಟರ್ನಲ್ಲಿ ಬಿಜೆಪಿ ಬಿಂಬಿಸಿದ್ದು, ಇತ್ತೀಚೆಗೆ ಎಸ್ಡಿಎ ಸರ್ಕಾರಿ ನೌಕರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಬಿಜೆಪಿ ಪರೋಕ್ಷವಾಗಿ ಹೇಳುವ ಮೂಲಕ ಕುಟುಕಿದಂತಿದೆ. ಈ ಪ್ರಕರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಹೆಸರೂ ತಳಕುಹಾಕಿಕೊಂಡಿತ್ತು ಎಂದು ವರದಿಗಳಾಗಿದ್ದವು.
ಇನ್ನು ಮೊನ್ನೆಯಿಂದ ಚರ್ಚೆಯಲ್ಲಿರುವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಹಾಗೂ ಮಾಜಿ ಕಾರ್ಪೋರೇಟರ್ ರಾಜು ಕಪನೂರ್ ಅವರಿಂದ ಕೊಲೆ ಬೆದರಿಕೆ ಹಾಕಿದ್ದಾರೆಂಬ ಆರೋಪದಡಿ ಗುತ್ತಿಗೆದಾರ ಸಚಿನ್ ಎಂಬುವವರು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಸೂಸೈಡ್ ಮಾಡಿಕೊಂಡಿದ್ದರು.
ಗುತ್ತಿಗೆದಾರ ಆತ್ಮಹತ್ಯೆಗೆ ಈ ಸಚಿವ ಕಾರಣವಾಗಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿರುವ ಬಿಜೆಪಿ, ಅತ್ತ ಬಳ್ಳಾರಿ, ಬೆಳಗಾವಿಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ವಿಚಾರವನ್ನು ಉಲ್ಲೇಖಿಸಿ ಬಾಣಂತಿಯರ ಸಾವಿಗೆ ಕಾರಣವಾದ ಸಚಿವ ದಿನೇಶ್ ಗುಂಡೂರಾವ್ ಎಂದು ಕುಟುಕಿದೆ. ಭ್ರಷ್ಟ ಸರ್ಕಾರದಲ್ಲಿ ದುಷ್ಟ ಸಚಿವರು ಎಂದು ಬಿಜೆಪಿಯು ತನ್ನ ಎಕ್ಸ್ ಪೋಸ್ಟರ್ನಲ್ಲಿ ಉಲ್ಲೇಖಿಸಿದೆ.