
ಬೆಳಗಾವಿ: ರಕ್ತದಾನ ಮಹಾದಾನ ಎಂಬ ನಾಣುಡಿಯನ್ನುಅನುಸರಿಸಿರುವ ಸಂತ ನಿರಂಕಾರಿ ಕ್ಯಾಂಪ್ ದೆಹಲಿ, ಬೆಳಗಾವಿ ಶಾಖೆಯ ವತಿಯಿಂದ ರವಿವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ನಗರದ ಕ್ಯಾಂಪ್ ಪ್ರದೇಶದಲ್ಲಿ ವಿಶಾಲವಾದ ಕಟ್ಟಡ ಹೊಂದಿರುವ ಸಂತ ನಿರಂಕಾರಿ ಬೆಳಗಾವಿ ಶಾಖೆಯು ನಿರಂತರ ಸತ್ಸಂಗವನ್ನು ಆಯೋಜಿಸುತ್ತ ಬಂದಿದ್ದು, ಜನತೆಗೆ ಸನ್ಮಾರ್ಗದ ಸಂದೇಶವನ್ನು ಹೇಳುತ್ತ ಬಂದಿದೆ.
ಈ ನಿಟ್ಟಿನಲ್ಲಿ ರವಿವಾರ ಬೃಹತ್ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಿತ್ತು. ರಕ್ತದಾನಕ್ಕಾಗಿ ಅಳವಡಿಸಲಾದ ಸುಮಾರು 18 ಹಾಸಿಗೆಗಳಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರು.ಆರೋಗ್ಯವಂತ ನೂರಾರು ಜನರು ಅಪಾಯದಲ್ಲಿರುವ ಜನರ ಜೀವ ಉಳಿಸುವ ಉದ್ದೇಶಕ್ಕಾಗಿ ಮನಪೂರ್ವಕವಾಗಿ ರಕ್ತದಾನ ಮಾಡಿದರು. ಆರ್ಥಿಕ ತಜ್ಞರು, ಹಾಗೂ ಸಂಖ್ಯಾಶಾಸ್ತ್ರ ತಜ್ಞರಾದ ಡಾ. ಎನ್. ಪ್ರಶಾಂತರಾವ್ ಅವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಸಂತ ನಿರಂಕಾರಿ ಕ್ಯಾಂಪ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಸಾವು, ಬದುಕಿನ ಮಧ್ಯೆ ಹೋರಾಡುತ್ತಿರುವ ಜನರ ಜೀವ ಉಳಿಸಲು ತುರ್ತು ಕಾಲದಲ್ಲಿ ಈ ರಕ್ತ ಮಹತ್ವದ ಪಾತ್ರ ವಹಿಸುತ್ತದೆ. ರಕ್ತದಾನ ದಂತಹ ಶ್ರೇಷ್ಠ ದಾನ ಕಾರ್ಯಕ್ರಮ ಆಯೋಜಿಸಿರುವ ಸಂತ ಮಿಷನ್ನರಿ ಕಾರ್ಯ ಶ್ಲಾಘನೀಯ. ಸುಮಾರು 300 ಜನರು ಇಂದು ರಕ್ತದಾನ ಮಾಡಲಿದ್ದಾರೆ ಎಂದು ಡಾ. ಪುರುಷೊತ್ತಮ ಬಿವಿ-5 ನ್ಯೂಜ್ ಗೆ ತಿಳಿಸಿದರು.
ಸುಮಾರು 41 ವರ್ಷಗಳಿಂದ ಸಂತ ಮಿಷನ್ನರಿ ಸತ್ಸಂಗವನ್ನು ಆಯೋಜಿಸುತ್ತ ಬಂದಿದ್ದು, ಇದರ ಭಾಗವಾಗಿ ಇಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಿದೆ. ದೆಹಲಿಯ ಸಂತ ನಿರಂಕಾರಿ ಸಂಸ್ಥೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಶಿಬಿರ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಈ ಶಿಬಿರ ಅಪಾಯದಲ್ಲಿರುವ ಜನರ ಜೀವ ಉಳಿಸಲು ನೆರವಾಗುತ್ತದೆ. ಇದು ಸಂಸ್ಥೆ ಮಾಡುತ್ತಿರುವ ಕಾರ್ಯಕ್ಕೆ ಸಾರ್ಥಕತೆ ತಂದು ಕೊಟ್ಟರೆ ಅಷ್ಟೇ ಸಾಕು ಎಂದು ಸಂಸ್ಥೆಯ ಬೆಳಗಾವಿ ಶಾಖೆಯ ಮುಖ್ಯಸ್ಥೆ ಶಶಿ ಆನಂದಜೀ ತಿಳಿಸಿದರು.




