ಮೌಲ್ಯಯುತ ಶೈಕ್ಷಣಿಕ ಸೇವೆ ಶ್ಲಾಘನೀಯ / ಜೆಪಿ ವಿದ್ಯಾಸಂಸ್ಥೆ ಶತಮಾನೋತ್ಸವ ಆಚರಿಸಲಿ: ಚಿದಾನಂದ್

Bharath Vaibhav
ಮೌಲ್ಯಯುತ ಶೈಕ್ಷಣಿಕ ಸೇವೆ ಶ್ಲಾಘನೀಯ / ಜೆಪಿ ವಿದ್ಯಾಸಂಸ್ಥೆ ಶತಮಾನೋತ್ಸವ ಆಚರಿಸಲಿ: ಚಿದಾನಂದ್
WhatsApp Group Join Now
Telegram Group Join Now

ತುರುವೇಕೆರೆ: ಶಿಕ್ಷಣ ವ್ಯಾಪಾರೀಕರಣವಾಗಿರುವ ಸಂದರ್ಭದಲ್ಲಿ ಕಡಿಮೆ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ಮೌಲ್ಯಯುತ, ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಉನ್ನತ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಜೆಪಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಸೇವೆ ಶ್ಲಾಘನೀಯವಾದುದು ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಚಿದಾನಂದ್ ತಿಳಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಗೆಳೆಯರ ಬಳಗದ ಜೆಪಿ ವಿದ್ಯಾಸಂಸ್ಥೆ ಆಯೋಜಿಸಿದ್ದ 45ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗ ಕುಟುಂಬದ ಮಕ್ಕಳು ನಗರ ಪ್ರದೇಶದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಇಂದು ಬಹಳ ಕಷ್ಟಸಾಧ್ಯವಾಗಿದೆ. ಕಾರಣ ಅಲ್ಲಿನ ದುಬಾರಿ ಅಭಿವೃದ್ದಿ ಹಾಗೂ ವ್ಯಾಸಂಗ ಶುಲ್ಕವನ್ನು ಭರಿಸಿ ಓದುವುದು ಬಡವರಿಗೆ ಸಾಧ್ಯವಿಲ್ಲದ ಮಾತಾಗಿದೆ. ಇಂತಹ ದುಬಾರಿ ವ್ಯಾಪಾರೀ ಮನೋಭಾವದ ಶಿಕ್ಷಣ ವ್ಯವಸ್ಥೆಯೊಳಗೆ ತಾಲೂಕು ಕೇಂದ್ರದಲ್ಲಿ ಸಮಾನ ಮನಸ್ಕ ಗೆಳೆಯರು ಸ್ಥಾಪಿಸಿದ ಸಂಸ್ಥೆ ಕಳೆದ 45 ವರ್ಷಗಳಿಂದ ಅತಿ ಕಡಿಮೆ ಶುಲ್ಕ ಪಡೆದು ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವುದು ಬಹಳ ದೊಡ್ಡ ಸಾಧನೆಯಾಗಿದೆ. ಈ ಸಂಸ್ಥೆಯಿಂದ ವ್ಯಾಸಂಗ ಮಾಡಿದ ಸಾಕಷ್ಟು ಮಂದಿ ಇಂದು ಸಮಾಜದ ದೊಡ್ಡ ಹುದ್ದೆಯನ್ನು ಅಲಂಕರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಜೆಪಿ ವಿದ್ಯಾಸಂಸ್ಥೆ ಶತಮಾನದ ವಾರ್ಷಿಕೋತ್ಸವವನ್ನೂ ಆಚರಿಸಲಿ, ತಾಲೂಕಿನ ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ನೀಡುವಂತಾಗಲಿ ಎಂದು ಹಾರೈಸಿದರು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮ ಪೋಷಕರ, ಶಾಲೆಯ ಹೆಸರನ್ನು ಮತ್ತೊಮ್ಮೆ ನಾವು ಕೇಳಬೇಕೆಂದರೆ ಅದು ವಿದ್ಯಾರ್ಥಿಗಳಾದ ನಿಮ್ಮಿಂತ ಮಾತ್ರ ಸಾಧ್ಯ. ನೀವು ಉತ್ತಮವಾಗಿ ಅಧ್ಯಯನ ಮಾಡಿ ಸಮಾಜದ ಉನ್ನತ ಹುದ್ದೆಯನ್ನು ಅಲಂಕರಿಸಿದಾಗ ಅಥವಾ ವಿಶೇಷ ಸಾಧನೆಗೈದಾಗ ಮತ್ತೊಮ್ಮೆ ಸಮಾಜ ನಿಮ್ಮನ್ನು, ನಿಮ್ಮ ಪೋಷಕರನ್ನು, ಶಾಲೆಯನ್ನು ನೆನೆಯುತ್ತದೆ. ಅಂತಹ ಕ್ಷಣವನ್ನು ಸೃಷ್ಟಿಸುವ ವ್ಯಕ್ತಿಗಳು ನೀವಾಗಬೇಕು ಎಂದ ಅವರು, ಪೋಷಕರು ಪಠ್ಯದ ಜೊತೆಗೆ ಮಕ್ಕಳಲ್ಲಿರುವ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡಿ ಅದರಲ್ಲೂ ಸಾಧಕರನ್ನಾಗಿ ಮಾಡಬೇಕೆಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜೆಪಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಆರ್.ರಂಗೇಗೌಡ ಮಾತನಾಡಿ, ಸಂಸ್ಥೆಯಲ್ಲಿ ಸಹಸ್ರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ಮಕ್ಕಳಿಗೂ ಪುಸ್ತಕದ ಶಿಕ್ಷಣ ಮಾತ್ರವಲ್ಲದೆ ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ಸಂಸ್ಕಾರ ನೀಡದೆ ವಿದ್ಯೆ ಕಲಿಸಿದರೆ ಸಮಾಜ ಕಂಟಕರಾಗುವ ಸಾಧ್ಯತೆಗಳಿರುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದರು.

ಸಂಸ್ಥೆಯು ಕಳೆದ 45 ವರ್ಷದಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದೆ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಶಾಲೆಯಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರನ್ನು ಸನ್ಮಾನಿಸುತ್ತಾ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಜೆಪಿ ವಿದ್ಯಾಸಂಸ್ಥೆಯು ಪದವಿ ಪೂರ್ವ ಶಿಕ್ಷಣ ನೀಡುವ ಚಿಂತನೆ ಮಾಡಿದ್ದು, 14 ಎಕರೆ ಜಮೀನನ್ನು ಸಹ ಖರೀದಿ ಮಾಡಲಾಗಿದೆ. ಗೆಳೆಯರ ಬಳಗದ ಪದಾಧಿಕಾರಿಗಳೆಲ್ಲರೂ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಒಲವನ್ನು ಹೊಂದಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವುದು ನಮ್ಮೆಲ್ಲರ ಏಕೈಕ ಗುರಿಯಾಗಿದೆ ಎಂದರು.

ಸಮಾರಂಭದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವೈದ್ಯ ಡಾ.ಹೀನಾ ನವಾಜ್, ತುರುವೇಕೆರೆ ಟೈಮ್ಸ್ ವಾರಪತ್ರಿಕೆ ಸಂಪಾದಕ ಗಿರೀಶ್ ಕೆ ಭಟ್, ಕರ್ಣಾಟಕ ಬ್ಯಾಂಕ್ ಆಫೀಸರ್ ರೋಹಿಣಿ, ಸಹಾಯಕ ಪ್ರಾಧ್ಯಾಪಕ ನವೀನ್, ರೈಲ್ವೆ ಇಲಾಖೆಯ ರಿಚರ್ಡ್ ಪ್ರಭೇಶ್ ಅವರನ್ನು ಅಭಿನಂದಿಸಲಾಯಿತು. ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಗೆಳೆಯರ ಬಳಗದ ಅಧ್ಯಕ್ಷ ಟಿ.ಎಸ್. ಪ್ರಕಾಶ್ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಆಶಾರಾಜಶೇಖರ್, ಪಪಂ ಸದಸ್ಯ ರವಿ, ಗೆಳೆಯರ ಬಳಗದ ಸಹಕಾರ್ಯದರ್ಶಿ ಲಕ್ಷ್ಮೀನರಸಿಂಹ, ಖಜಾಂಚಿ ಕೆ.ಟಿ.ಶಿವಣ್ಣ, ಆಡಳಿತಾಧಿಕಾರಿ ನಜೀರ್ ಅಹಮದ್, ಪದಾಧಿಕಾರಿಗಳಾದ ಫಯಾಜ್ ಅಹಮದ್ ಖಾನ್, ಟಿಎವಿ ಗುಪ್ತ, ತಿರುಮಲಯ್ಯ, ಶಿವಲೀಲಾ, ರಾಜಮ್ಮ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಯಣ್ಣ, ಮುಖ್ಯ ಶಿಕ್ಷಕರಾದ ತುಕಾರಾಮ್, ಓಂಕಾರಮೂರ್ತಿ, ಮಹಲಿಂಗಯ್ಯ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ವರ್ಗ ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!