ವಿಜಯಪುರ: ಇವತ್ತು ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಿದ್ದು, ಇದಕ್ಕೆ ನಾವೇ ಕಾರಣ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮವರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ಈ ತರಹ ಬರೆಸಿದ್ದಾರೆ.
ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರನ್ನೂ ಒಗ್ಗೂಡಿಸಿದರೆ ಲಿಂಗಾಯತರು 1 ಕೋಟಿಗೂ ಅಧಿಕ ಆಗುತ್ತಾರೆ ಎಂದು ತಿಳಿಸಿದರು.
ಜಾತಿಗಣತಿ ಅಧ್ಯಯನ ಮಾಡಲು ಇಂದು ವರದಿ ಪ್ರತಿ ಬಂದಿದೆ. ನಾನು ಇದುವರೆಗೂ ಅಧ್ಯಯನ ಮಾಡಿಲ್ಲ. ಅದನ್ನ ತೆಗೆದು ನೋಡುತ್ತೇನೆ. ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಿದೆ ಎಂಬುದನ್ನು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ ಎಂದರು.
ಮೊದಲು ವರದಿಯನ್ನ ಅಧ್ಯಯನ ಮಾಡಿದ ನಂತರ ನಮ್ಮ ಸಂಶಯಗಳೇನಿವೆ ಅದನ್ನ ಚರ್ಚಿಸುತ್ತೇವೆ. ವರದಿಯ ಒಳಗಡೆ ಏನಿದೆ ಎಂದು ನೋಡಿ ನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.