ತುರುವೇಕೆರೆ : ಆಡುಮುಟ್ಟದ ಸೊಪ್ಪಿಲ್ಲ, ಲಯನ್ಸ್ ಮಾಡದ ಸೇವೆ ಇಲ್ಲ ಎಂಬಂತೆ ತುರುವೇಕೆರೆ ಲಯನ್ಸ್ ಕ್ಲಬ್ ಕಳೆದ 36 ವರ್ಷಗಳಲ್ಲಿ ಸಹಸ್ರಾರು ಕಾರ್ಯಕ್ರಮಗಳನ್ನು ನಡೆಸಿ ತಾಲೂಕಿನ ಜನರಿಗೆ ಅಗತ್ಯ ಸೇವೆ ಸಲ್ಲಿಸಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ತಿಳಿಸಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರ ತುರುವೇಕೆರೆ ಭೇಟಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನಿವೃತ್ತ ಸೇನಾಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ವಿಶೇಷವಾಗಿ ಜನರಿಗೆ ಬಹುಮುಖ್ಯವಾಗಿ ಬೇಕಿರುವ ಆರೋಗ್ಯ ಕುರಿತಾದ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಮೂಲಕ ಸುಮಾರು 30 ಸಾವಿರಕ್ಕೂ ಅಧಿಕ ಮಂದಿಗೆ ದೃಷ್ಟಿದೋಷ ನಿವಾರಣೆ ಮಾಡಿ ಬೆಳಕನ್ನು ನೀಡುವ ಕೆಲಸವನ್ನು ಲಯನ್ಸ್ ಸಂಸ್ಥೆ ಮಾಡಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಿಶೇಷಚೇತನರಿಗೆ ತ್ರಿಚಕ್ರ ಸೈಕಲ್, ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ, ಮಹಿಳೆಯರಿಗೆ, ವೃದ್ದರಿಗೆ, ಅಶಕ್ತರಿಗೆ ಅನೇಕ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಇದಕ್ಕೆಲ್ಲಾ ಲಯನ್ಸ್ ಸಂಸ್ಥೆಯಲ್ಲಿರುವ ಸಮಾನ ಮನಸ್ಕರ ತಂಡ ಕಾರಣವಾಗಿದೆ. ಈ ತಂಡದ ಪರಿಶ್ರಮ ಹಾಗೂ ಸೇವೆಯನ್ನು ಜನತೆ ಮೆಚ್ಚಿರುವ ಫಲವಾಗಿ ಇಂದು ಲಯನ್ಸ್ ಭವನ ನಿರ್ಮಾಣವಾಗಿದೆ ಎಂದರು.

ತುರುವೇಕೆರೆಯಲ್ಲಿ ಜನಿಸಿದ ಕರ್ನಲ್ ರಾಮಚಂದ್ರ ಅವರು 1971 ರ ಭಾರತ ಪಾಕಿಸ್ತಾನ ಯುದ್ಧದ ನಂತರದಲ್ಲಿ ದೇಶಸೇವೆಗಾಗಿ ಸೈನ್ಯ ಸೇರ್ಪಡೆಗೊಂಡು ಭಾರತೀಯ ಭೂಸೇನೆಯಲ್ಲಿ ಕರ್ನಲ್ ಹುದ್ದೆಯನ್ನು ಅಲಂಕರಿಸಿ 37 ವರ್ಷಗಳ ಕಾಲ ದೇಶರಕ್ಷಣೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಕರ್ನಲ್ ರಾಮಚಂದ್ರ ಅವರನ್ನು ಲಯನ್ಸ್ ಕ್ಲಬ್ ಗೌರವಿಸುತ್ತಿರುವುದು ಕೇವಲ ತಾಲೂಕಿಗಲ್ಲ ಭಾರತೀಯ ಸೇನೆಗೆ, ರಾಷ್ಟçಕ್ಕೆ ಸಂದ ಗೌರವ ಎಂಬುದಾಗಿ ತಿಳಿಸಿದರು.
ಗೌರವ ಸ್ವೀಕರಿಸಿದ ಕರ್ನಲ್ ರಾಮಚಂದ್ರ ಕೆ.ಎ. ಮಾತನಾಡಿ, ನಾನು ಹುಟ್ಟಿದ ತಾಲೂಕಿನಲ್ಲಿ, ನನ್ನವರ ಸಮ್ಮುಖದಲ್ಲಿ ಹಾಗೂ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಸಂಸ್ಥೆಯಿಂದ ಗೌರವ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ಬಹಳಷ್ಟು ಮಂದಿ ಆತ್ಮೀಯರು, ಸ್ನೇಹಿತರು ತುರುವೇಕೆರೆಯಲ್ಲಿದ್ದಾರೆ. ಬಹಳ ವರ್ಷಗಳ ನಂತರ ನನ್ನವರೊಂದಿಗೆ ಬೆರೆಯುವ ಅವಕಾಶ ಲಭ್ಯವಾಗಿದೆ. ನಮ್ಮೂರಿಗೆ ನನ್ನನ್ನು ಆಹ್ವಾನಿಸಿ ಸೇವೆಯನ್ನು ಗುರುತಿಸಿ ಗೌರವಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್.ಪರಮೇಶ್ವರಯ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಜಿ.ಮೋಹನ್ ಉದ್ಘಾಟಿಸಿದರು. ಸಮಾರಂಭದಲ್ಲಿ ಶಾರದಾ ಮೋಹನ್, ಮಂಜುಳಾ ಪರಮೇಶ್ವರಯ್ಯ, ಸಂಪುಟ ಕಾರ್ಯದರ್ಶಿ ಅಶೋಕ್ ಕೆ.ಕುಲಕರ್ಣಿ, ಖಜಾಂಚಿ ನಾಗೇಶ್, ಪ್ರಾಂತ್ಯಾಧ್ಯಕ್ಷ ರಾಜೇಶ್, ವಲಯಾಧ್ಯಕ್ಷ ರಂಗನಾಥ್, ಕಲ್ಪತರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಡಾ.ನಾಗರಾಜ್, ಖಜಾಂಚಿ ಸುನಿಲ್, ಟಿ.ಎಸ್.ರಾಜನ್, ಎಂ.ಡಿ.ಮೂರ್ತಿ ಎಂದರು.
ವರದಿ: ಗಿರೀಶ್ ಕೆ ಭಟ್




