ತುರುವೇಕೆರೆ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ನೇಕಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ (ಅಣ್ಣಯ್ಯ) ತಿಳಿಸಿದರು.
ತಾಲ್ಲೂಕಿನ ಮುನಿಯೂರು ಗ್ರಾಮದಲ್ಲಿರುವ ತಮ್ಮ ಸ್ವಗೃಹದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನವೆಂಬರ್ 13 ರಂದು ನಡೆಯುವ ಉಪಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಹಾಗೂ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ. ಸರ್ಕಾರದ ಜನವಿರೋಧಿ, ಅಭಿವೃದ್ದಿ ವಿರೋಧಿ ನೀತಿಗೆ ಜನತೆ ಈ ಮೂರು ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು, ಕಾಂಗ್ರೆಸ್ ಸರ್ಕಾರ ಮುಖಭಂಗ ಅನುಭವಿಸಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ಸಚಿವರುಗಳು ಕೇವಲ ಗ್ಯಾರಂಟಿಯ ಸುತ್ತ ಗಿರುಕಿ ಹೊಡೆಯುತ್ತಾ ಕಾಲಕಳೆಯುತ್ತಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿಗಳಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರೇ ಅಭಿವೃದ್ದಿಗೆ ಅನುದಾನ ನೀಡಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದೇವೆ, ಜನರು ಸರ್ಕಾರದ ಪರವಾಗಿದ್ದಾರೆಂಬ ಭ್ರಮಾಲೋಕದಲ್ಲಿ ತೇಲಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಕಾಲದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಜನರು ಮರೆತಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ಅಧಿಕಾರ, ಕುರ್ಚಿಯ ಆಸೆಗಾಗಿ ರಾಜ್ಯದ ಅಭಿವೃದ್ದಿಯನ್ನು, ಹಿತವನ್ನು ಬಲಿಕೊಟ್ಟಿದೆ. ಮುಖ್ಯಮಂತ್ರಿಯಾಗುವುದಕ್ಕೆ ನಾ ಮುಂದು, ತಾ ಮುಂದು ಎಂದು ಕಾಂಗ್ರೆಸ್ ಪಕ್ಷದಲ್ಲೇ ಕುರ್ಚಿ ಕಿತ್ತಾಟ ಜೋರಾಗಿ ನಡೆಯುತ್ತಿದ್ದು, ಸರ್ಕಾರ ಯಾವಾಗ ಬೇಕಾದರೂ ಉರುಳಬಹುದಾಗಿದೆ ಎಂದರು.
ಚುನಾವಣೆಗೆ ಮುನ್ನ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಿಸಿದ ಸರ್ಕಾರ ಅದಕ್ಕೆ ಸೂಕ್ತ ಅನುದಾನ ಹೊಂದಿಸುವಲ್ಲಿ ವಿಫಲವಾಗಿದೆ. ಇದರ ಫಲವಾಗಿ ಇಂದು ಸರ್ಕಾರದ ಖಜಾನೆ ಖಾಲಿಯಾಗಿ ಗ್ಯಾರಂಟಿ ಯೋಜನೆಗಳಿಗೆ ಅನುದಾನದ ಕೊರತೆಯಾಗಿದೆ. ಗ್ಯಾರಂಟಿ ಯೋಜನೆ ಯಶಸ್ವಿಯಾಗಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್ ಕೇವಲ 9 ಸ್ಥಾನ ಗಳಿಸಿತು. ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬಹುದಿತ್ತಲ್ಲಾ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಹಗರಣದ ಸಾಲು ಸಾಲೇ ಹೊರಬರುತ್ತಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರ ತಲೆದಂಡವಾಗಿದೆ. ಈಗ ಸರ್ಕಾರದ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ, ಮತ್ತಷ್ಟು ಹಗರಣಗಳು ಶೀಘ್ರ ಹೊರಬೀಳಲಿದ್ದು, ಸರ್ಕಾರದ ಹಣೆಬರಹವನ್ನು ಜನತೆ ತೀರ್ಮಾನಿಸಲಿದ್ದಾರೆ ಎಂದರು.
ವರದಿ: ಗಿರೀಶ್ ಕೆ ಭಟ್