ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ಎಂದೇ ಹೆಸರಾಗಿರುವ ರೂಪರ್ಟ್ ಮುರ್ಡೂಕ್ ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ಅವರು ರಷ್ಯಾ ಮೂಲದ 67 ವರ್ಷದ ಎಲೆನಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯದಲ್ಲಿರುವ ರೂಪರ್ಟ್ ಮುರ್ಡೂಕ್ ಅವರ ಫಾರ್ಮ್ ಹೌಸ್ ನಲ್ಲಿ ಈ ವಿವಾಹ ನಡೆದಿದ್ದು, ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳು ಹಾಜರಿದ್ದರು.ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.
ಆರು ಮಕ್ಕಳನ್ನು ಹೊಂದಿರುವ ರೂಪರ್ಟ್ ಮುರ್ಡೂಕ್ ಮೊದಲಿಗೆ ಆಸ್ಟ್ರೇಲಿಯನ್ ಫ್ಲೈಟ್ ನಲ್ಲಿ ಪರಿಚಾರಿಕೆಯಾಗಿದ್ದ ಪೆಟ್ರಿಷಿಯಾ ಜೊತೆ ಮದುವೆಯಾಗಿದ್ದು, 1960ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು.
ಆ ಬಳಿಕ ಅನ್ನಾ ಎಂಬ ವರದಿಗಾರ್ತಿಯನ್ನು ರೂಪರ್ಟ್ ಮುರ್ಡೂಕ್ ಮದುವೆ ಮಾಡಿಕೊಂಡಿದ್ದು ಅವರೊಂದಿಗೆ ಸುಧೀರ್ಘ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ 1999 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮುರ್ಡೂಕ್ ಅವರ ಮೂರನೇ ಮದುವೆ 2013ರಲ್ಲಿ ಮುರಿದು ಬಿದ್ದಿತ್ತು.
ಮಾಡೆಲ್ ಜೆರ್ರಿ ಜೊತೆ ನಾಲ್ಕನೇ ಬಾರಿಗೆ ಮದುವೆಯಾಗಿದ್ದ ರೂಪರ್ಟ್ ಮುರ್ಡೂಕ್ ಬಳಿಕ ವಿಚ್ಛೇದನ ಪಡೆದುಕೊಂಡಿದ್ದು, ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ನಂತಹ ಬಹುದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ಈಗ ಐದನೇ ಮದುವೆ ಮಾಡಿಕೊಂಡಿದ್ದಾರೆ.