ಸಿರುಗುಪ್ಪ :– ತಾಲೂಕಿನ ಸಿರಿಗೇರಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಇನ್ನಿತರ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ವೈದ್ಯಾಧಿಕಾರಿ ತಿಪ್ಪೆಸ್ವಾಮಿರೆಡ್ಡಿ ಚಾಲನೆ ನೀಡಿದರು.
ನಂತರ ಮಾತನಾಡಿ ತುರ್ತುಪರಿಸ್ಥಿತಿಯ ಸಮಯದಲ್ಲಿನ ರೋಗಿಗಳಿಗೆ ಜೀವ ದಾನವನ್ನು ನೀಡಲು ಅಗತ್ಯವಾಗಿರುವ ರಕ್ತದಾನ ಮಾಡಲಿಕ್ಕೆ ಸಂಘ ಸಂಸ್ಥೆಗಳು, ಗ್ರಾಮಸ್ಥರು ಮುಂದೆ ಬಂದಿರುವುದು ಸ್ವಾಗತಾರ್ಹವೆಂದರು.
ವೈದ್ಯರಾದ ನಾಗರಾಜ ಅವರು ಮಾತನಾಡಿ ಇತ್ತೀಚೆಗೆ ಪ್ರಕೃತಿ ವಿಕೋಪ, ಡೆಂಗ್ಯೂ ಜ್ವರದಂತಹ ಸಂದರ್ಭಗಳಿಂದಾಗಿ ರಕ್ತದಾನದ ಅವಶ್ಯಕತೆಯಿರುತ್ತದೆ. ನಾವು ಮಾಡುವ ರಕ್ತದಾನದಿಂದ ನಾಲ್ಕು ಜನರ ಜೀವವನ್ನು ಉಳಿಸಬಹುದಾಗಿದೆ.
ಅಲ್ಲದೇ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾ ಬಂದ ವ್ಯಕ್ತಿಯ ದೇಹದಲ್ಲಿ ಕೊಬ್ಬಿನಾಂಶ ಕರಗುತ್ತದೆ. ರಕ್ತದೊತ್ತಡ, ಮದುಮೇಹದಂತಹ ಕಾಯಿಲೆಗಳಿಂದ ಪಾರಾಗಬಹುದಾಗಿದ್ದು, ಆರೋಗ್ಯವಂತ ಎಲ್ಲಾ ಗ್ರಾಮಸ್ಥರು ರಕ್ತದಾನ ಮಾಡಬಹುದೆಂದು ತಿಳಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಉಪ್ಪಾರ ರಾಮಪ್ಪ, ಆರೋಗ್ಯ ನಿರೀಕ್ಷಕರಾದ ಕೆ.ಎಮ್.ಷಡಕ್ಷರಯ್ಯ, ಮಾರೆಪ್ಪ ಮುಖಂಡರಾದ ವಿ.ಹನುಮೇಶ ಹಾಗೂ ಆಶಾ ಕಾರ್ಯಕರ್ತೆಯರು, ಇನ್ನಿತರ ಸಂಘಸಂಸ್ಥೆಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.
ವರದಿ.ಶ್ರೀನಿವಾಸ ನಾಯ್ಕ