ತುರುವೇಕೆರೆ: ಸದಸ್ಯರ ಅಧ್ಯಯನ ಪ್ರವಾಸ, ವಿಕಲಚೇನರಿಗೆ ತ್ರಿಚಕ್ರ ವಾಹನ ವಿತರಣೆ, ವಾಣಿಜ್ಯ ಸಂಕೀರ್ಣ ಮಳಿಗೆ ಹರಾಜು ಸೇರಿದಂತೆ ಹಲವು ವಿಷಯಗಳು ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಸಭೆಯಲ್ಲಿ ಚರ್ಚಿತವಾಗುತ್ತಿದೆ, ಆದರೆ ಯಾವುದೂ ಅನುಷ್ಟಾನವಾಗಿಲ್ಲ. ಸಭೆಯನ್ನು ಕಾಟಾಚಾರಕ್ಕೆ ಮಾಡಬೇಕೇ? ಸದಸ್ಯರ ಮಾತಿಗೆ ಮನ್ನಣೆ ಇಲ್ಲದ ಮೇಲೆ ನಾವೇಕೆ ಸಭೆಗೆ ಬರಬೇಕು? ಕೇವಲ ಕಾಫಿ ಬಿಸ್ಕೆಟ್ ತಿನ್ನುವುದಕ್ಕೆ ಸಭೆಗೆ ಬರಬೇಕಾ? ಎಂದು ಪಟ್ಟಣ ಪಂಚಾಯ್ತಿ ಸದಸ್ಯರಾದ ಎನ್.ಆರ್.ಸುರೇಶ್, ಅಂಜನ್ ಕುಮಾರ್, ಪ್ರಭಾಕರ್, ಚಿದಾನಂದ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ಅಧ್ಯಕ್ಷೆ ಸ್ವಪ್ನ ನಟೇಶ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ವಿಶೇಷ ಸಭೆಯಲ್ಲಿ ಸದಸ್ಯರಾದ ಎನ್.ಆರ್.ಸುರೇಶ್, ಅಂಜನ್ ಕುಮಾರ್ ಮಾತನಾಡಿ, ಸದಸ್ಯರಿಗೆ ಸ್ವಚ್ಛತಾ ಉಪಕ್ರಮಗಳನ್ನು ಅನುಸರಿಸುತ್ತಿರುವ ಹೊರರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಪ್ರವಾಸ ಕೈಗೊಳ್ಳುವ ಬಗ್ಗೆ ರೂಪುರೇಷೆ ಸಿದ್ದಪಡಿಸುವ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ. ನಮ್ಮ ಅಧಿಕಾರವಧಿಯಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಕಲ್ಲುಗಳನ್ನು ಆಯಾ ಕಾಮಗಾರಿಗಳ ಬಳಿ ಹಾಕಿಸುವಂತೆ ಹತ್ತಾರು ಬಾರಿ ತಿಳಿಸಲಾಗಿದೆ. ಆದರೂ ಯಾವುದೊಂದೂ ಕಾರ್ಯಗತವಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ ತಾಪಂ, ಜಿಪಂ ಚುನಾವಣೆ ಘೋಷಣೆಯಾಗುತ್ತದೆ, ಆಗ ನಮ್ಮ ಚುನಾವಣಾ ನೀತಿ ಸಂಹಿತೆ ಬರುತ್ತದೆ. ಆಗ ಯಾವುದೇ ಕೆಲಸ ನಿರ್ವಹಿಸಲಾಗುವುದಿಲ್ಲ. ನಮ್ಮ ಅವಧಿಯ ಶಂಕುಸ್ಥಾಪನೆ ಕಲ್ಲುಗಳು ಈಗಿರುವಂತೆಯೇ ಮೂಲೆ ಸೇರುತ್ತದೆ. ಮುಂದೆ ಬರುವವರು ಅವರ ಹೆಸರನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ, ಕೆಲಸ ಮಾಡಿದ ನಾವುಗಳು ನೋಡಿಕೊಂಡು ಸುಮ್ಮನಿರಬೇಕಾದ ಪರಿಸ್ಥಿತಿ ಬರುತ್ತದೆ, ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಯಿಸಿದ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ವಾಣಿಜ್ಯ ಸಂಕೀರ್ಣ ಮಳಿಗೆಗೆಳ ಹರಾಜಿಗೆ ಜಿಲ್ಲಾಧಿಕಾರಿಗಳ ಒಪ್ಪಿಗೆ ದೊರೆತಿದೆ. ಕಟ್ಟಡಕ್ಕೆ ಪ್ರತ್ಯೇಕ ಪರಿವರ್ತಕ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವಲ್ಪ ಕೆಲಸ ಬಾಕಿ ಇದ್ದು ಕೂಡಲೇ ಶಂಕುಸ್ಥಾಪನೆ ಕಲ್ಲುಗಳನ್ನು ಸ್ಥಾಪಿಸಲಾಗುವುದು ಎಂದರು.
ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಬಗ್ಗೆ ನಾನು ಅಧ್ಯಕ್ಷನಾದ ಅವಧಿಯಿಂದಲೂ ಪ್ರಸ್ತಾಪಿಸಲಾಗಿದೆ. ಇದುವರೆಗೂ ಹಲವು ಅಧ್ಯಕ್ಷರು ಬದಲಾಗಿದ್ದರೂ ಅಧಿಕಾರಿಗಳು ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಬಗ್ಗೆ ಚಿಂತನೆಯನ್ನೇ ನಡೆಸಿಲ್ಲ, ಜಿಲ್ಲಾ ನಗರಾಭಿವೃದ್ದಿ ಕೋಶ (ಡಿಯುಡಿಸಿ) ಇಂದ ಅನುಮತಿ ಪಡೆಯಲು ಇಷ್ಟು ವಿಳಂಬವೇಕೆ? ವಿಕಲಚೇತನರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸದಸ್ಯ ಚಿದಾನಂದ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, 14 ಲಕ್ಷ ರೂ ವೆಚ್ಚದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಬಗ್ಗೆ ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಲ್ಲಿ ಟೆಂಡರ್ ಪ್ರಕ್ರಿಯೆ ನಡೆಯದ ಹೊರತು ನಾವೇನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಹತ್ತಾರು ಬಾರಿ ಪತ್ರ ಬರೆದಿರುವುದಲ್ಲದೆ, ನೇರ ತೆರಳಿ ಚರ್ಚಿಸಲಾಗಿದೆ ಎಂದರು.
ಪಟ್ಟಣದ ವಾಣಿಜ್ಯ ಸಂಕೀರ್ಣ ಮಳಿಗೆ ಹರಾಜು, ಇಂದಿರಾ ಕ್ಯಾಂಟೀನ್ ಉದ್ಘಾಟನೆಯನ್ನು ಬೇಗ ನಡೆಸುವಂತೆ ಸದಸ್ಯರು ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಪಟ್ಟಣದ ಕ್ರೀಡಾಂಗಣದಲ್ಲಿ ಲೈಟ್ ವ್ಯವಸ್ಥೆ ಹಾಗೂ ನಾಗರೀಕರಿಗಾಗಿ ಓಪನ್ ಜಿಮ್ ಪ್ರಾರಂಭಕ್ಕೆ ಈಗಾಗಲೇ ಎರಡು ಬಾರಿ ಟೆಂಡರ್ ಕರೆದಿದ್ದರೂ ಇದುವರೆಗೂ ಕೆಲಸವಾಗಿಲ್ಲ ಏಕೆ ಎಂದು ಸದಸ್ಯರು ಪ್ರಶ್ನಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು ಟೆಂಡರ್ ನಿಯಮಗಳ ಅನ್ವಯ ಇಲ್ಲದ ಕಾರಣ, ಪುನಃ ಟೆಂಡರ್ ನಡೆಸಬೇಕಿದೆ. ಕೂಡಲೇ ಟೆಂಡರ್ ಕರೆದು ಕೆಲಸ ನಡೆಸಲಾಗುವುದು. ಲೈಟ್ ಹಾಗೂ ಓಪನ್ ಜಿಮ್ ನಿರ್ಮಾಣ ಕಾಮಗಾರಿಯು 25 ಲಕ್ಷ ಅಂದಾಜು ವೆಚ್ಚದ್ದಾಗಿದೆ ಎಂದು ಮುಖ್ಯಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಎನ್.ಆರ್.ಸುರೇಶ್, ಅಂಜನ್ ಕುಮಾರ್, ಪ್ರಭಾಕರ್, ಚಿದಾನಂದ್, ಯಜಮಾನ್ ಮಹೇಶ್, ರುದ್ರೇಶ್, ಜಯಮ್ಮ, ಶೀಲಾಶಿವಪ್ಪನಾಯಕ, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಇಂಜಿನಿಯರ್ ಹರೀಶ್, ಕಂದಾಯ ನಿರೀಕ್ಷಕ ಪ್ರಶಾಂತ್, ಅಧಿಕಾರಿಗಳಾದ ಸದಾನಂದ್, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಫಾತಿಮಾ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ