ಕೊಲ್ಲಂ(ಕೇರಳ): ದೇವರ ಅನುಗ್ರಹಕ್ಕಾಗಿ ಪುರುಷರು ಮಹಿಳೆಯರಾಗುವ ವಿಶಿಷ್ಟ ಆಚರಣೆಯೊಂದು ಕೇರಳದ ಕೊಲ್ಲಂನಲ್ಲಿರುವ ದೇವಸ್ಥಾನದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಕೇರಳದ ಹೃದಯ ಭಾಗದಲ್ಲಿರುವ ಕೊಲ್ಲಂನ ಚವರಾದಲ್ಲಿರುವ ಕೊಟ್ಟಂಕುಳಂಗರ ದೇವಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಸಾವಿರಾರು ಪುರುಷರು ತಮ್ಮನ್ನು ತಾವು ‘ಮಹಿಳೆ’ಯಾಗಿ ಪರಿವರ್ತಿಸಿಕೊಳ್ಳುವ ಮೂಲಕ ವಿಶಿಷ್ಟವಾಗಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನದಲ್ಲಿ ಸಾವಿರಾರು ಪುರುಷರು ಸಾಂಪ್ರದಾಯಿಕ ಮಹಿಳೆಯರ ಉಡುಗೆಗಳನ್ನು ತೊಟ್ಟು, ಕೈಯಲ್ಲಿ ದೀಪ ಹಿಡಿದುಕೊಂಡು ದೇವಿಯ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲುತ್ತಾರೆ.
“ಕೊಟ್ಟಂಕುಳಂಗರ ಚಾಮಯವಿಳಕ್ಕು” ಎಂದು ಕರೆಯಲ್ಪಡುವ ಈ ವಿಶಿಷ್ಟ ಸಂಪ್ರದಾಯವು ದೇವಾಲಯದ 19 ದಿನಗಳ ವಾರ್ಷಿಕ ಉತ್ಸವದ ಕೊನೆಯ ಎರಡು ದಿನಗಳ ಕಾಲ ನಡೆಯುತ್ತದೆ. ಪುರಾತನ ಕಥೆಯ ಪ್ರಕಾರ, ಈ ಸಮಯದಲ್ಲಿ ಮಹಿಳೆಯರಂತೆ ವೇಷ ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಪುರುಷರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ.
ಈ ಆಚರಣೆಯ ಮೂಲವು ದನಗಾಹಿ ಬಾಲಕರ ಗುಂಪಿನೊಂದಿಗೆ ಬೆಸೆದುಕೊಂಡಿದೆ. ಜಾನಪದದ ಪ್ರಕಾರ ದನ ಕಾಯುವ ಹುಡುಗರು ಹುಡುಗಿಯರಂತೆ ತಮಾಷೆಯಾಗಿ ಉಡುಪು ಧರಿಸುತ್ತಿದ್ದರು ಮತ್ತು ಹೂ ಹಾಗೂ ‘ಕೊಟ್ಟನ್’ ಎಂಬ ಸ್ಥಳೀಯ ಭಕ್ಷ್ಯವನ್ನು ಒಂದು ಕಲ್ಲಿಗೆ ಅರ್ಪಿಸುತ್ತಿದ್ದರು. ಆ ಹುಡುಗರ ಭಕ್ತಿಗೆ ಮೆಚ್ಚಿ ಒಂದು ದಿನ ದೇವಿ ಪ್ರತ್ಯಕ್ಷಳಾಗಿ ಅವರಿಗೆ ಆಶೀರ್ವಾದ ಮಾಡುತ್ತಾಳೆ ಎಂದು ಜಾನಪದದ ಕಥೆಗಳಲ್ಲಿ ಹೇಳಲಾಗಿದೆ.
ನಂತರ ಈ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಯಿತು ಹಾಗೂ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಇಲ್ಲಿ ಬೆಳೆದು ಬಂದಿದೆ. ದನ ಕಾಯುವ ಹುಡುಗರು ಪೂಜಿಸುತ್ತಿದ್ದ ಕಲ್ಲನ್ನೇ ಇಲ್ಲಿ ದೇವಿಯಾಗಿ ಪ್ರತಿಷ್ಠಾಪಿಸಲಾಗಿದೆ. ಈ ಕಲ್ಲು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ಕಾಲಾನಂತರದಲ್ಲಿ ದೇವಸ್ಥಾನದಲ್ಲಿ ನಡೆಯುವ ಉತ್ಸವವು ಗಮನಾರ್ಹವಾಗಿ ಬೆಳೆದಿದ್ದು, ವಾರ್ಷಿಕವಾಗಿ 10,000 ಕ್ಕೂ ಹೆಚ್ಚು ಪುರುಷರು ಭಾಗವಹಿಸುತ್ತಾರೆ. ಅನೇಕರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಗಮಿಸುತ್ತಾರೆ. ಸೀರೆ ಉಟ್ಟುಕೊಳ್ಳಲು ಬಾರದ ಪುರುಷರಿಗೆ ಸ್ಥಳೀಯ ಮಹಿಳೆಯರು ಸೀರೆ ಉಡಿಸಿ ಅವರಿಗೆ ಸಹಾಯ ಮಾಡುತ್ತಾರೆ. ಅಲ್ಲದೆ ಈ ಪುರುಷರು ಮಹಿಳೆಯರಂತೆ ಮೇಕಪ್ ಸಹ ಮಾಡಿಕೊಂಡು ಥೇಟ್ ಮಹಿಳೆಯರಂತೆಯೇ ಕಾಣಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ರೆಮ್ಯಾ, “ಪ್ರತಿ ವರ್ಷ ವಿಭಿನ್ನ ಧರ್ಮ, ಜಾತಿಗಳಿಗೆ ಸೇರಿದ ಸಾವಿರಾರು ಜನ ದೂರದ ಸ್ಥಳಗಳಿಂದ ಉತ್ಸವಗಳಲ್ಲಿ ಭಾಗವಹಿಸಲು ಬರುತ್ತಾರೆ. ಸೀರೆ ಉಡಲು ಬಾರದ ಪುರುಷರು ಮತ್ತು ಹುಡುಗರಿಗೆ ನಾನು ಸೇರಿದಂತೆ ಸ್ಥಳೀಯ ಮಹಿಳೆಯರು ಸಹಾಯ ಮಾಡುತ್ತೇವೆ. ಪುರುಷ ಎಂದು ಹೇಳಲಾಗದಷ್ಟು ಸುಂದರವಾಗಿ ನಾವು ಮೇಕಪ್ ಕೂಡ ಮಾಡುತ್ತೇವೆ” ಎಂದು ಐಎಎನ್ಎಸ್ಗೆ ತಿಳಿಸಿದರು.