ಬೆಂಗಳೂರು: ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.
ಅನರ್ಹ ರೇಷನ್ ಕಾರ್ಡ್ ರದ್ದಾಗಿರುವ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಅವರಿಗೂ ದುಡ್ಡು ರಿಲೀಸ್ ಆಗಲಿದೆ. ರೇಷನ್ ಕಾರ್ಡ್ ಆಧರಿಸಿ ನಾವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ದುಡ್ಡು ಹಾಕುತ್ತಿದ್ದೇವೆ. ಕೆಲ ರೇಷನ್ ಕಾರ್ಡ್ ರದ್ದಾದಾಗ ದುಡ್ಡು ಹೋಲ್ಡ್ ಆಗಿರಬಹುದು. ಆದರೆ ಅವರು ತೆರಿಗೆ ಪಾವತಿದಾರರಲ್ಲದಿದ್ದಲ್ಲಿ ಹಣ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.




