Ad imageAd image

ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ, ವದಂತಿಗೆ ಕಿವಿಗೊಡಬಾರದು: ಸಚಿವ ಜೋಶಿ

Bharath Vaibhav
ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ, ವದಂತಿಗೆ ಕಿವಿಗೊಡಬಾರದು: ಸಚಿವ ಜೋಶಿ
WhatsApp Group Join Now
Telegram Group Join Now

ನವದೆಹಲಿ/ಹುಬ್ಬಳ್ಳಿ: “ದೇಶದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬುದು ಶುದ್ಧ ಸುಳ್ಳು. ಯಾರೊಬ್ಬರೂ ಈ ಹುಸಿ ವದಂತಿಗೆ ಕಿವಿಗೊಡಬಾರದು” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್​​ ಜೋಶಿ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಮಾಹಿತಿ ನೀಡಿರುವ ಅವರು, “ದೇಶದ ವಿವಿಧೆಡೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಕೆಲವರು ಸುಳ್ಳು ವದಂತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕಿಡಿಗೇಡಿಗಳ ಪ್ರಯತ್ನವಿದು” ಎಂದು ಸ್ಪಷ್ಟಪಡಿಸಿದರು.

“ಪಂಜಾಬ್‌ನಲ್ಲಿ ಇಂಥ ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದರೆ, ದೇಶದ ಯಾವುದೇ ಸ್ಥಳದಲ್ಲೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚೇ ದಾಸ್ತಾನಿದೆ. ಜನರು ಅಗತ್ಯ ಆಹಾರ ಧಾನ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳಿಗೆ ಎಲ್ಲೂ ಮುಗಿಬೀಳಬೇಕಿಲ್ಲ” ಎಂದು ಹೇಳಿದರು.

“ದೇಶಾದ್ಯಂತ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಎಲ್ಲೆಡೆಯೂ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲೇ ಆಹಾರ ಧಾನ್ಯ ಮತ್ತು ಅಗತ್ಯ ಸಾಮಗ್ರಿ ಸರಂಜಾಮು ಇರುವುದು ದೃಢಪಟ್ಟಿದೆ. ದೇಶದಲ್ಲಿ ಸಾಕಷ್ಟು ಸಂಗ್ರಹವಿದೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ” ಎಂದು ಸಚಿವ ಜೋಶಿ ತಿಳಿಸಿದರು.

“ದೇಶದಲ್ಲಿ ಅಕ್ಕಿ, ಗೋಧಿ, ಕಡಲೆ, ತೊಗರಿ, ಮಸೂರ್, ಹೆಸರುಕಾಳು ಹೀಗೆ ಎಲ್ಲಾ ಆಹಾರ ಧಾನ್ಯಗಳು, ಬೇಳೆ-ಕಾಳುಗಳು ಅಗತ್ಯಕ್ಕಿಂತ ದುಪ್ಪಟ್ಟು, ದೊಡ್ಡ ಪ್ರಮಾಣದಲ್ಲೇ ಸಂಗ್ರಹವಿದೆ. ಆಹಾರ ಪದಾರ್ಥ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿದೆ ಎಂಬ ವದಂತಿ ನಿರಾಧಾರವಾಗಿದ್ದು, ಯಾರೂ ಇದನ್ನು ನಂಬಬಾರದು. ಜನತೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ” ಎಂದು ಹೇಳಿದರು.

ತರಾತುರಿ ಖರೀದಿ ಬೇಡ: “ಸುಳ್ಳು ವದಂತಿಗೆ ಕಿವಿಗೊಟ್ಟು ಯಾರೊಬ್ಬರೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಖರೀದಿಗೆ ತರಾತುರಿ ತೋರಬಾರದು. ಬೇರೆ ಬೇರೆ ಮಾರುಕಟ್ಟೆಗಳಿಗೆ ತೆರಳಿ ದುಪ್ಪಟ್ಟು ಹಣ ತೆತ್ತು ಖರೀದಿಯಲ್ಲಿ ತೊಡಗಿಕೊಳ್ಳುವ ಅವಶ್ಯಕತೆಯಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!