ಚಾಮರಾಜನಗರ: ರಾಜ್ಯದಲ್ಲಿ 2200 ಲೈನ್ ಮನ್ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲೈನ್ ಮನ್ ಗಳ ನೇಮಕಾತಿ ಮಾಡಿಕೊಳ್ಳುವ ಸಂದರ್ಶನವನ್ನು ಒಂದೇ ದಿನದಲ್ಲಿ ಕೈಗೊಳ್ಳಲಾಗುವುದು.
ಈ ಹಿಂದೆ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಹುದ್ದೆಗಳು ಖಾಲಿ ಉಳಿಯುತ್ತಿದ್ದವು ಎಂದರು
ಹುದ್ದೆಗಳು ಖಾಲಿ ಉಳಿಯದಂತೆ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಮಹತ್ವದ ತೀರ್ಮಾನ ಮಾಡಲಾಗಿದೆ. ರಾಜ್ಯದಾದ್ಯಂತ ಏಕಕಾಲದಲ್ಲಿ 2200 ಲೈನ್ ಮ್ಯಾನ್ ಗಳ ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಸಿಗಲಿದೆ.
ಈ ಹಿಂದೆ ಲೈನ್ ಮನ್ ಗಳ ನೇಮಕಾತಿ ಏಕಕಾಲದಲ್ಲಿ ನಡೆಯದೇ ಒಂದು ಕಡೆ ಅರ್ಜಿ ಸಲ್ಲಿಸಿದವರು ಮತ್ತೊಂದು ಜಿಲ್ಲೆಗೂ ಅರ್ಜಿ ಹಾಕುತ್ತಿದ್ದರು. ಉದ್ಯೋಗ ಪಡೆದವರು ಕರ್ತವ್ಯಕ್ಕೆ ಹಾಜರಾಗುತ್ತಿರಲಿಲ್ಲ. ಇನ್ನು ಮುಂದೆ ಇಂತಹ ಸಮಸ್ಯೆಯಾಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.