ಬೆಂಗಳೂರು : ತನ್ನ ಸ್ವಂತ ಹೆತ್ತವರ ಆರೈಕೆ ಮಾಡದಂತಹ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಯಾವುದೇ ಆಸ್ತಿ ಪಾಲು ಸಿಗಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ನ ಕಲಾಪದಲ್ಲಿ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007” ಯಡಿ ತಂದೆ-ತಾಯಿ ಹಾಗೂ ಹಿರಿಯರ ಆರೈಕೆ ಮಾಡದಿದ್ದಲ್ಲಿ ಅವರ ಮಕ್ಕಳು ಅಥವಾ ಸಂಬಂಧಿಕರಿಗೆ ನೀಡಿದ್ದ ವಿಲ್-ದಾನಪತ್ರವನ್ನು ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ.ಇದು ಕೇಂದ್ರದ ಕಾಯ್ದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಪೋಷಕರು, ಹಿರಿಯರನ್ನು ಕಡೆಗಣಿಸಿ, ಆರೈಕೆ ಮಾಡದೇ ಬೀದಿಗೆ ಬಿಡುವಂತಹ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು.
ಕೇಂದ್ರ ಸರ್ಕಾರ 2007ರಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂದರು.




