ಬೆಳಗಾವಿ: ಗ್ಯಾರೆಂಟಿ ಯೋಜನೆಗಳ ಪೈಕಿ ಒಂದಾದ ಗೃಹ ಲಕ್ಷ್ಮಿಯಿಂದ ಬಂದ ಹಣದ ಸಹಾಯದಿಂದ ವ್ಯಾಸಂಗ ಮಾಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಪೃಥ್ವಿ ಹೋಳಿ ಸಾಧನೆ ಮಾಡಿದ್ದು, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಹೋಳಿ ಇತಿಹಾಸದಲ್ಲಿ 100ಕ್ಕೆ 100 ಅಂಕ ಪಡೆದಿದ್ದು,ತನ್ನ ವಿದ್ಯಾಭ್ಯಾಸಕ್ಕೆ ತಮ್ಮ ತಾಯಿಗೆ ಬರುತ್ತಿದ್ದ ಗೃಹ ಲಕ್ಷ್ಮೀ ಯೋಜನೆಯ ಹಣ ನೆರವಾಗಿದೆ ಎಂದು ಹೇಳಿದ್ದಾರೆ.ಇದೇ ವೇಳೆ ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂಬ ಆಶಯವಿದೆ ಎಂದು ಹೇಳಿಕೊಂಡಿದ್ದಾರೆ.
ಈ ವಿಷಯ ತಿಳಿದು ವಿದ್ಯಾರ್ಥಿನಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೆರವಾಗಿದ್ದಾರೆ. ತಕ್ಷಣವೇ ತರಬೇತಿ ಕೇಂದ್ರಕ್ಕೆ ಶಿಫಾರಸು ಮಾಡಿದ ಸಚಿವರು,ವಿದ್ಯಾರ್ಥಿನಿಗೆ ಉಚಿತ ತರಬೇತಿ ನೀಡಬೇಕು, ಆಕೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡರು. ನನ್ನ ತಾಯಿಗೆ ಬರುತ್ತಿರುವ ಗೃಹ ಲಕ್ಷ್ಮೀ ಯೋಜನೆಯ ಹಣ ನನಗೆ ವಿದ್ಯಾಭ್ಯಾಸಕ್ಕೆ ನೆರವಾಯಿತು. ಮುಂದಿನ ದಿನಗಳಲ್ಲಿ ಐಪಿಎಸ್ ಮಾಡುವ ಕನಸುಹೊಂದಿದ್ದೇನೆ.
ನಾನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ. ಸಚಿವರಿಗೆ ನಾನು ಮತ್ತು ನನ್ನ ತಾಯಿ ಅನಂತ ಅನಂತ ವಂದನೆಗಳನ್ನು ಸಲ್ಲಿಸುತ್ತೇವೆ ಎಂದು ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾರೆ.