ಬೆಳಗಾವಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. 2ನೇ ಹಂತದ ಮತದಾನವಿರುವ ಬೆಳಗಾವಿ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಅತ್ಯಂಚ ಭಿರುಸಿನ ಪ್ರಚಾರ ನಡೆಸುತ್ತಿವೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕ್ಷೇತ್ರ ಹೊಸದಲ್ಲ. 2014ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಆದರೆ ಈ ಬಾರಿ ಮಗನನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನೆ, ಶಾಸಕಿಯಾಗಿ, ಸಚಿವೆಯಾಗಿ ತಾವು ಮಾಡಿದ ಸಾಧನೆಗಳು ಬೆನ್ನಿಗಿವೆ.
ವಿಶೇಷವೆಂದರೆ ಸಚಿವರು ಪ್ರಚಾರಕ್ಕೆಂದು ಹೊದಲ್ಲೆಲ್ಲ ಜನರು ಸ್ವಯಂ ಪ್ರೇರಣೆಯಿಂದ ಹೊರಗೆ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಜನರಲ್ಲಿ ಬದಲಾವಣೆಯ ನಿರೀಕ್ಷೆ ಕಾಣುತ್ತಿದೆ. ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಹಳಷ್ಟು ಕೆಲಸ ಮಾಡಿರುವುದು ಎಲ್ಲೆಡೆ ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ನಾವು ನಿಟ್ಟುಸಿರು ಬಿಡುವಂತಾಗಿದೆ. ಬೆಲೆ ಏರಿಕೆಯಿಂದ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಗೃಹ ಲಕ್ಷ್ಮೀ, ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಕಾಂಗ್ರೆಸ್ ಸರಕಾರ ನಮ್ಮದೇ ಸರಕಾರ ಎನ್ನುವ ಭಾವನೆ ಮೂಡಿದೆ ಎಂದು ಜನರು ಹೇಳುತ್ತಿದ್ದಾರೆ.
ಹಳ್ಳಿಗಳಲ್ಲಿ ಮಹಿಳೆಯರು, ವಿಶೇಷವಾಗಿ ವೃದ್ಧೆಯರು ಹತ್ತಿರ ಬಂದು ಸಚಿವರನ್ನು ಅಪ್ಪಿ, ತಲೆಯ ಮೇಲೆ ಕೈ ಇಟ್ಟು ಹರಸಿ, ಹಾರೈಸುವುದು ಸಾಮಾನ್ಯವಾಗಿತ್ತು. ಲಕ್ಷ್ಮೀ ಹೆಬ್ಬಾಳಕರ್ ಮೇಲಿನ ಮಮಕಾರ (ಮಮತೆ) ಯಾವುದೇ ಊರಲ್ಲಿ ಹೋದರೂ ಕಾಣುತ್ತಿತ್ತು. ಪ್ರತಿ ಊರಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ, ಹೂವಿನ ಮಳೆಗರೆಯುವುದು, ಆರತಿ ಮಾಡಿ ಸ್ವಾಗತಿಸುವುದು.
ಜನರ ಇಂತಹ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುವುದು ಎಂದೇ ತಿಳಿಯುತ್ತಿಲ್ಲ. ಅವರ ಋಣ ತೀರಿಸುವುದು ಸಾಧ್ಯವೇ ಇಲ್ಲ. ಈ ಬಾರಿ ಮೃಣಾಲ ಹೆಬ್ಬಾಳಕರ್ ಆಯ್ಕೆಯಾಗುವುದು ಖಚಿತ. ಚುನಾವಣೆಯ ನಂತರ ಜನರು ನಿರೀಕ್ಷಿಸಿದ ರೀತಿಯಲ್ಲಿ ಅವರ ಸೇವೆ ಮಾಡಲಾಗುವುದು. ಹಿಂದಿನ ಯಾವುದೇ ಸಂಸದರು ಮಾಡದ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳುತ್ತಾರೆ.
ಲಕ್ಷ್ಮೀ ಹೆಬ್ಬಾಳಕರ್ ಅವರು 2013ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಆದರೆ ಸೋತ ನಂತರ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಒಬ್ಬ ಶಾಸಕನಿಗಿಂತ ಹೆಚ್ಚಾಗಿ ಕೆಲಸ ಮಾಡಿದರು. ಪ್ರತಿ ಹಳ್ಳಿ ಓಡಾಡಿ ಅಭಿವೃದ್ಧಿ ಯೋಜನೆಗಳನ್ನು ತಂದರು. ಇದರಿಂದಾಗಿ ಜನರು ಅವರನ್ನು ಪ್ರೀತಿಸಿದರು, ಅವರ ಮೇಲೆ ವಿಶ್ವಾಸ ತೋರಿಸಿದರು. ಪರಿಣಾಮವಾಗಿ 2018ರಲ್ಲಿ ಅವರು 52 ಸಾವಿರ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು.
2018ರಲ್ಲಿ ಗೆದ್ದ ನಂತರ ಕೂಡ ಒಂದೇ ಒಂದು ದಿನ ಮನೆಯಲ್ಲಿ ಕುಳಿತುಕೊಳ್ಳದೆ ಮಾದರಿಯಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಜನರ ಕಷ್ಟಗಳಿಗೆ ಸ್ಪಂದಿಸಿದರು, ಕ್ಷೇತ್ರದ ಮನೆಮಗಳೆನಿಸಿದರು. ಇದರಿಂದಾಗಿ 2023ರ ಚುನಾವಣೆಯಲ್ಲಿ 56 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ನಂತರ ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಸಾಕಷ್ಟು ಕೆಲಸ ಮಾಡಿದರು.
ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದ ಜನರ ನಿರೀಕ್ಷೆ ಇದೇ ಆಗಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರಂತಹ ಜನಪ್ರತಿನಿಧಿ ಬೇಕು, ಗ್ರಾಮೀಣ ಕ್ಷೇತ್ರದಂತೆ ಅಭಿವೃದ್ಧಿಯಾಗಬೇಕು ಎಂದು ಜನರು ಬಯಸುತ್ತಿದ್ದಾರೆ. ಪ್ರಚಾರಕ್ಕೆ ಹೋದಲ್ಲೆಲ್ಲ ಅದನ್ನೇ ಹೇಳುತ್ತಿದ್ದಾರೆ. ಸದಾ ನಮ್ಮೊಂದಿಗೆ ಇದ್ದು, ನಮ್ಮ ಕಷ್ಟ ಸುಖದಲ್ಲಿ ಭಾಗಿಯಾಗು ಜನಪ್ರತಿನಿಧಿ ಇದ್ದರೇನೇ ಚಂದ ಎಂದು ಜನರು ಹೇಳುತ್ತಿದ್ದಾರೆ
ವರದಿ:ಪ್ರತೀಕ ಚಿಟಗಿ