ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ; ಕಾಂಗ್ರೆಸ್ ಸಾಧನೆ ಅಪಾರ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಯರಗಟ್ಟಿಯ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಚುನಾವಣಾ ಸಮಾವೇಶ- ಪ್ರಜಾಧ್ವನಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬೆಳಗಾವಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದ್ದು, ಬೆಳಗಾವಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೆಲ್ಲವೂ ಕಾಂಗ್ರೆಸ್ ಕಾಲದಲ್ಲಿಯೇ ಆಗಿದ್ದು; ಬಿಜೆಪಿ ಬೆಳಗಾವಿಗೆ ಸದಾ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಕಿಡಿಕಾರಿದರು.
ಶೆಟ್ಟರ್ ಗೆ ಸ್ವಾಭಿಮಾನಿ ಜನರಿಂದ ತಕ್ಕ ಪಾಠ
ಬಿಜೆಪಿ ಬೆಳಗಾವಿಯಲ್ಲಿ ಟಿಕೆಟ್ ನೀಡಿಕೆಯಲ್ಲೂ ಅನ್ಯಾಯ ಮಾಡಿದೆ. ಬೆಳಗಾವಿಯ ಸ್ವಾಭಿಮಾನ ಧಿಕ್ಕರಿಸಿ ಹುಬ್ಬಳ್ಳಿಯರಿಗೆ ಟಿಕೆಟ್ ನೀಡಿದೆ. ಬಿಜೆಪಿ ಅಭ್ಯರ್ಥಿಯಿಂದ ಬೆಳಗಾವಿಗೆ ಏನಾದರೂ ಒಳ್ಳೆಯದು ಆಗಿದೆಯೇ ಪ್ರಶ್ನಿಸಿದ ಸಚಿವರು, ಐಐಟಿ, ಐಟಿಬಿಟಿ ಕಂಪನಿಗಳನ್ನೆಲ್ಲ ಹುಬ್ಬಳ್ಳಿ-ಧಾರವಾಡಕ್ಕೆ ಕೊಂಡೊಯ್ದ ಜಗದೀಶ್ ಶೆಟ್ಟರ್ ಗೆ ಬೆಳಗಾವಿಯ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ 75 ವರ್ಷಗಳಿಂದ ಆಡಳಿತ ನಡೆಸುತ್ತಿದೆ ಎನ್ನುವುದನ್ನೇ ಬಿಜೆಪಿಯವರು ಮರೆತಿದ್ದಾರೆ. ಕೇವಲ 10 ವರ್ಷಗಳಿಂದ ಭಾರತ ಇದೆಯೆಂದು ಅವರು ಭ್ರಮೆಯಲ್ಲಿದ್ದಾರೆ. ಇಂದು ಭಾರತವನ್ನು ಎಲ್ಲರೂ ತಲೆಎತ್ತಿ ನೋಡುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಬಿಜೆಪಿಯವರು ಎಂದೂ ಮರೆಯಬಾರದು; ಕೇವಲ 10 ವರ್ಷಗಳಲ್ಲಿ ಭಾರತ ವಿಶ್ವಮಾನ್ಯವಾಗಲು ಹೇಗೆ ಸಾಧ್ಯವಾಯಿತು?ಎಂದು ಸಚಿವರು ಪ್ರಶ್ನಿಸಿದರು.
ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ
ಬಿಜೆಪಿಯವರು, ಪ್ರಧಾನಿ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡಬೇಕಿತ್ತು; ಆದರೆ, ಅವರಲ್ಲಿ ಯಾವ ಸಾಧನೆಗಳೂ ಇಲ್ಲ; ಹೀಗಾಗಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯವರು ಹಲವು ಸುಳ್ಳುಗಳನ್ನೇ ಸತ್ಯವೆಂದು ಹೇಳುತ್ತಿದ್ದಾರೆ; ಜನರೇನು ದಡ್ಡರಲ್ಲ. ಚುನಾವಣೆ ಮೂಲಕ ಸರಿಯಾದ ತೀರ್ಪು ನೀಡಲಿದ್ದಾರೆ. ಕಾಂಗ್ರೆಸ ಪಕ್ಷ ಹಿಂದಿನಿಂದಲೂ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ರಾಷ್ಟ್ರ ಮತ್ತು ರಾಜ್ಯದ ಜನರ ಸೇವೆ ಮಾಡುತ್ತಾ ಬಂದಿದೆ; ಹಾಗಾಗಿ ಕಾಂಗ್ರೆಸ್ ಮೇಲೆ ಜನರು ವಿಶ್ವಾಸವನ್ನಿಟ್ಟಿದ್ದಾರೆ ಎಂದರು.
ಪಂಚ ಗ್ಯಾರಂಟಿಯಿಂದ ಆರ್ಥಿಕ ಸಬಲತೆ
ಕೇಂದ್ರದ ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಲೇ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವಂತೆ ಮಾಡಿದೆ. ಕೊರೊನಾ ನಂತರವಂತೂ ಜನರ ಜೀವನಮಟ್ಟ ಕುಸಿದಿದ್ದು, ಹಾಗಾಗಿ ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟುವ ಕೆಲಸ ಮಾಡಿದ್ದೇವೆ. ಪ್ರತಿ ಮನೆ ಮನೆಗಳು ಬೆಳಗಲು ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಅಷ್ಠೇ ಅಲ್ಲ, ಬಡವರ, ಶ್ರಮಿಕರ ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಹತ್ತು ಹಲವಾರು ಯೋಜನೆಗಳನ್ನು ತಂದಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಸಚಿವರಾದ ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಶಾಸಕರಾದ ಅಶೋಕ್ ಪಟ್ಟಣ್, ವಿಶ್ವಾಸ್ ವೈದ್ಯ, ರಾಜು ಸೇಠ್, ಮಹಾಂತೇಶ್ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪ್ರಕಾಶ್ ರಾಥೋಡ್, ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ಸಿಗೆ ಅಭೂತಪೂರ್ವ ಬೆಂಬಲ
ಬೆಳಗಾವಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿಯ ಸಮಗ್ರ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಸಚಿವರು ಮನವಿ ಮಾಡಿದರು
ವರದಿ ಪ್ರತೀಕ ಚಿಟಗಿ