ಶಿರಸಂಗಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸವದತ್ತಿ ತಾಲೂಕಿನ ಶಿರಸಂಗಿಯ ಸುಪ್ರಸಿದ್ಧ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಶಕ್ತಿದೇವತೆ ಶ್ರೀ ಕಾಳಿಕಾದೇವಿಯ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸಚಿವರು, ವಿಶ್ವಕರ್ಮ ಸಮಾಜ ವಿಶ್ವವನ್ನೇ ಸೃಷ್ಟಿ ಮಾಡಿದ ಸಮಾಜ. ದೇಶದ ಯಾವುದೇ ಭಾಗಕ್ಕೆ ಹೋದರೂ ಸಮಾಜದ ಬಾಂಧವರು ಮೂಲ ಕಸುಬನ್ನು ಬಿಟ್ಟಿಲ್ಲ ಎಂದು ಹೇಳಿದರು.
ಸಾಫ್ಟ್‌ವೇರ್ ಯುಗದಲ್ಲೂ ವಿಶ್ವಕರ್ಮರ ಕಲೆಯನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದರು. ಸಾಮಾಜಿಕ ಬದ್ಧತೆ ಸಾಮಾಜಿಕ ಕಳಕಳಿ ಹೊಂದುವುದು ಮುಖ್ಯ. ಕಳೆದ 25 ವರ್ಷಗಳ ಶ್ರಮ ಇಂದು ನನ್ನನ್ನು ಮಂತ್ರಿ ಮಾಡಿದೆ. ನಾವು ಎಷ್ಟು ದಿನ ಬದುಕುತ್ತೀವಿ ಅನ್ನೋದು ಮುಖ್ಯ ಅಲ್ಲ. ಹೇಗೆ ಬದುಕುತ್ತೀವಿ ಅನ್ನೋದು ಮುಖ್ಯ ಎಂದು ಹೇಳಿದರು.
ಜನರ ಒಳಿತಿಗಾಗಿ ಹೋರಾಟ ಮಾಡುತ್ತಿರುವೆ. ಸಮಾಜ ಸೇವೆಯೇ ನನ್ನ ಮುಖ್ಯ ಗುರಿ ಎಂದು ಹೇಳಿದರು. ವಿಶ್ವಕರ್ಮ ಸಮಾಜದ ಜೊತೆಯಲ್ಲಿ ಎಂದಿಗೂ ನಾನಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವರು ಹಾಗೂ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಅರೇಮಾದನಹಳ್ಳಿಯ ಸುಜ್ಞಾನ ಗುರುಪೀಠದ ವಿಭೂಷಿತ ಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ, ಚಿಕ್ಕುಂಬಿಯ ಅಭಿಮವ ನಾಗಲಿಂಗ ಸ್ವಾಮೀಜಿ, ಶ್ರೀ ಜಗದ್ಗುರು ಮಳೆರಾಜೇಂದ್ರ ಮಹಾ ಸ್ವಾಮಿ ಮಠದ ಜಗನ್ನಾಥ ಮಹಾ ಸ್ವಾಮೀಜಿ, ಶಿರಸಂಗಿ ವಿಶ್ವ ಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೋ.ಪಿ.ಬಿ.ಬಡೀಗೇರ ಉಪಸ್ಥಿತರಿದ್ದರು.
ವರದಿ:ಪ್ರತೀಕ ಚಿಟಗಿ