ಶಿವಮೊಗ್ಗ : ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೊಡಲಿ ಪೆಟ್ಟು ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನರೇಗಾ ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು. ಆದರೆ ಕೇಂದ್ರ ಹಾಗೆ ಮಾಡಿಲ್ಲ ಎಂದರು.
ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ಜಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ.
ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿಯಲ್ಲಿ 6 ಕೋಟಿ ಕುಟುಂಬದ ಪರವಾಗಿ ರಾಷ್ಟ್ರ ವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ? ಬಿಜಿಪಿಗರಿಗೆ ನಾಚಿಕೆ ಆಗಬೇಕು ಎಂದು ಗುಡುಗಿದರು.




