ಬೆಳಗಾವಿ :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ಜನರ ಸಂಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಜೊತೆಗೆ, ತಮ್ಮ ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ನೊಂದವರಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ.
ಶನಿವಾರ ಬೆಳಗ್ಗೆ ಪ್ರವಾಹಪೀಡಿತ ಬಸುರ್ತೆ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾಗಿರುವ ಸ್ಥಳಗಳ ಪರಿಶೀಲನೆ ನಡೆಸಿದರು. ಸಂತ್ರಸ್ತರ ಕಷ್ಟಗಳನ್ನು ಆಲಿಸಿದರು. ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಯಾರೂ ಧರ್ಯಗುಂದುವುದು ಬೇಡ ಎಂದು ಧೈೈರ್ಯ ತುಂಬಿದರು. ನಂತರ ಕೆಲವು ಸಂತ್ರಸ್ತರಿಗೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಿದರು.
ನಂತರ ಸತತ ಸುರಿಯುತ್ತಿರವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಕ್ಕಿನಕೇರಿ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾಗಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು. ಎಲ್ಲವನ್ನೂ ಪರಿಶೀಲನೆ ನಡೆಸಿದ ಸಚಿವರು, ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದರು. ಕೆಲವು ಸಂತ್ರಸ್ತರಿಗೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಎಡೆಬಿಡದೆ ಮಳೆಯಲ್ಲೂ ನಿರಂತರವಾಗಿ ಜನರೆಡೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಎಲ್ಲ ಸಂದರ್ಭದಲ್ಲೂ ಜನರ ಜೊತೆ ನಾನಿದ್ದೇನೆ ಎನ್ನುವ ಸಂದೇಶವನ್ನು ಸಚಿವರು ನೀಡುತ್ತಿದ್ದಾರೆ.
ವರದಿ: ಪ್ರತೀಕ ಚಿಟಗಿ