Ad imageAd image

ಅಂಗನವಾಡಿ ಆಹಾರದಲ್ಲಿ ಗುಣಮಟ್ಟ ಕಾಪಾಡಿ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
WhatsApp Group Join Now
Telegram Group Join Now

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಕಟ್ಟಪ್ಪಣೆ


ಬೆಂಗಳೂರು
: ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ ಯೋಜನೆ ಜಾರಿಯಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ, ಸಂಬಂಧಪಟ್ಟ ಅಧಿಕಾರಿಗಳೇ ನೇರಹೊಣೆ ವಹಿಸಬೇಕಾಗುತ್ತದೆ. ಜೊತೆಗೆ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಯಾಗುವ ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದರು.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಇಲಾಖೆಯ ಯೋಜನೆಗಳ ಜಿಲ್ಲಾವಾರು ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು.

ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಲಾಗುತ್ತಿರುವ ಎಂಎಸ್ಪಿಸಿ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ, ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಪೋಷಣ್ ಯೋಜನೆಯಡಿ ಹೆಚ್ಚು ಮಕ್ಕಳನ್ನು ನೋಂದಾಯಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಮಳೆಗಾಲದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಟಿಸಿ, ಮರ, ಗಿಡಗಳಿದ್ದರೆ ತೆರವುಗೊಳಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಶಿಶು ಸಂಯೋಜನಾಧಿಕಾರಿಗಳು (ಸಿಡಿಪಿಒ), ಪರಿವೀಕ್ಷಣಾ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಬಿಡುಗಡೆ
ಅಂಗನವಾಡಿ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಚ್ಯುಟಿ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಸುಮಾರು 2,537 ಕಾರ್ಯಕರ್ತೆಯರಿಗೆ ಆರ್ಥಿಕವಾಗಿ‌ ನೆರವಾಗಲಿದೆ. ಇದಕ್ಕಾಗಿ 29.91ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ:

ಗ್ರಾಮಾಂತರ ಭಾಗದಲ್ಲಿ ಆಗುತ್ತಿರುವ ಬಾಲ್ಯವಿವಾಹ ತಡೆಗಟ್ಟಲು ತೆಗೆದುಕೊಂಡಿರುವ‌ ಕಾರ್ಯಕ್ರಮಗಳ ಮಾಹಿತಿ ಪಡೆದ ಸಚಿವರು, ಇನ್ಮುಂದೆ ರಾಜ್ಯದಲ್ಲಿ ಬಾಲ್ಯ ವಿವಾಹ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.ಈ ವೇಳೆ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ನಿರ್ದೇಶಕರಾದ ಎನ್.ಸಿದ್ದೇಶ್ವರ್, ವಿಶೇಷಾಧಿಕಾರಿ ಬಿ.ಎಚ್.ನಿಶ್ಚಲ್‌ ಸೇರಿದಂತೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!