ಹುಕ್ಕೇರಿ: ‘ಚಿಕ್ಕೋಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು 90 ಸಾವಿರಕ್ಕಿಂತ ಹೆಚ್ಚು ಮತಗಳ ಮುನ್ನಡೆಯಿಂದ ಗೆಲ್ಲಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣಕ್ಕೆ ಭೇಟಿ ನೀಡಿದ್ದ ಅವರು ಫಲಿತಾಂಶದ ನಂತರ ಕಾರ್ಯಕರ್ತರ ಜತೆ ಚುನಾವಣೆಯ ಫಲಿತಾಂಶ ಕುರಿತು ಚರ್ಚಿಸಿ ಮಾತನಾಡಿದರು.’ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತಳಪಾಯ ಗಟ್ಟಿಯಾಗಿದ್ದು, ಆ ತಳಪಾಯವು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಮರುಕಳಿಸಬೇಕು’ ಎಂದು ಸಲಹೆ ನೀಡಿದರು.
ವಿವಿಧ ಗ್ರಾಮಗಳ ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಸಚಿವರ ಮುಂದೆ ಅರುಹಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೆಲವೊಮ್ಮೆ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರಬಹುದು ಅಥವಾ ಬರಲಿಕ್ಕಿಲ್ಲ. ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನುಗ್ಗಬೇಕು’ ಎಂದರು.
ಇದೇ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಮತ್ತು ಅಲ್ಪಸಂಖ್ಯಾತ ಘಟಕದ ವತಿಯಿಂದ ಸಚಿವರನ್ನು ಸತ್ಕರಿಸಲಾಯಿತು.
ಮುಖಂಡರಾದ ಮಲ್ಲಿಕಾರ್ಜುನ್ ರಾಶಿಂಗೆ, ದಿಲೀಪ ಹೊಸಮನಿ, ಬಸವರಾಜ ಕೋಳಿ, ಬಾವುಸಾಹೇಬ ಪಾಂಡ್ರೆ, ಕೆಂಪಣ್ಣ ಶಿರಹಟ್ಟಿ, ಕಿರಣ ಕೋಳಿ, ಶ್ರೀನಿವಾಸ ವ್ಯಾಪಾರಿ, ಮಯೂರ್ ಪೋತದಾರ್, ಅಲ್ಪಸಂಖ್ಯಾತ ಘಟಕದ ಸಲಿಂ ಕಳಾವಂತ, ಇರ್ಷಾದ್ ಮೊಕಾಶಿ, ಕಬೀರ್ ಮಲಿಕ್, ಬಾಹುಬಲಿ ಸೊಲ್ಲಾಪುರೆ, ರವಿ ಕರಾಳೆ, ಇಫ್ರಿಕಾರ ಪೀರಜಾದೆ, ಭೀಮಗೌಡ ಅಮ್ಮಣಗಿ, ಹಿರಿಯ ವಕೀಲ ಎಂ.ಎಂ.ಪಾಟೀಲ್ ಇದ್ದರು.