ಹಾವೇರಿ: ಭಾರಿ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಹಾರಿ ಬಿದ್ದಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕುದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಈ ಘಟನೆ ನಡೆದಿದೆ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆಂದು ಬೃಹತ್ ಪೆಂಡಾಲ್ ಹಾಕಲಾಗಿತ್ತು.
ಕಾರ್ಯಕ್ರಮವನ್ನು ಮುಗಿಸಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಲಾರಂಭಿಸಿದೆ.
ಕಾರ್ಯಕ್ರಮಕ್ಕೆ ಹಾಕಿದ್ದ ಬೃಹತ್ ಪೆಂಡಾಲ್ ತರಗೆಲೆಯಂತೆ ಹಾರಿ ಬಿದ್ದಿದೆ. ಪೆಂಡಾಲ್ ಪಕ್ಕದಲ್ಲಿಯೇ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಕಾರ್ಯಕ್ರಮವನ್ನು ಮುಗಿಸಿ ವೇದಿಕೆಯಿಂದ ಹೊರಬಂದು ಸಚಿವರು ನಿಂತಿದ್ದರು. ಕೆಲವೇ ಸಮಯದಲ್ಲಿ ಸುಂಟರಗಾಳಿ ಬೀಸಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.




