ಕಲಬುರ್ಗಿ : ಕಲಬುರ್ಗಿಯಲ್ಲಿ ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಇದ್ದಂತಹ ದರ್ಗಾವನ್ನು ಧ್ವಂಸಗೊಳಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಎಂಬ ಗ್ರಾಮದಲ್ಲಿ ಈ ಒಂದು ದುಷ್ಕೃತ್ಯ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವಂತಹ ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಸಮಾಧಿ ಕಿತ್ತು ಹಾಕಿದ ಕಿಡಿಗೇಡಿಗಳು ಮಜಾರ್, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ.
ದರ್ಗಾ ಧ್ವಂಸ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೈಯದ್ ಅಲಿ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.ಪ್ರಕರಣದ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು ದರ್ಗಾ ಮುಂಭಾಗದಲ್ಲಿನ ಹೊಲದಲ್ಲಿ ಇದ್ದ ಮತ್ತೊಂದು ಸಣ್ಣದಾದ ಸಮಾಧಿ ಕಿತ್ತು ಹಾಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ವೇಳೆ ದರ್ಗಾದ ಉಸ್ತುವಾರಿ ವಹಿಸಿರುವ ಸೈಯದ್ ಅಲಿ ಅವರು ಕಿಡಿಗೇಡಿಗಳ ಪತ್ತೆಗೆ ಮನವಿ ಮಾಡಿದರು. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.