ಹಾಸನ: ಮದುವೆ ಸಮಾರಂಭಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಧರಿಸಿ ಬಂದಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.
ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಪ್ರಿಯಾಂಕಾ(29) ಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಫೆಬ್ರವರಿ 12ರಂದು ರಾತ್ರಿ 8 ಗಂಟೆ ಸುಮಾರಿಗೆ ಬೇಲೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದರು.
ಕುಟುಂಬದವರು ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 373ರ ಕೆರೆಯ ಸಮೀಪ ಪ್ರಿಯಾಂಕಾ ಅವರ ಚಪ್ಪಲಿ, ಒಳಉಡುಪು, ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಿಯಾಂಕಾ ಮೈಮೇಲೆ ಇದ್ದ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದಿರುವ ಶಂಕೆ ಹಿನ್ನೆಲೆ ಅಗ್ನಿಶಾಮಕ ದಳದ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಹಾಸನ ಗ್ರಾಮಾಂತರ ಠಾಣೆ ಹಾಗೂ ಬೇಲೂರು ಪೊಲೀಸರು ತನಿಖೆ ಕೈಗೊಂಡು ನಾಪತ್ತೆಯಾಗಿದ್ದ ಪ್ರಿಯಾಂಕಾರನ್ನು ಪತ್ತೆ ಮಾಡಿದ್ದಾರೆ.
ನಾಪತ್ತೆಯಾಗಿದ್ದ ಪ್ರಿಯಂಕಾ ಕುಣಿಗಲ್ ನಲ್ಲಿ ಪತ್ತೆಯಾಗಿದ್ದಾರೆ. ಪತಿಯ ಗೆಳೆಯ ಡೇವಿಡ್ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದು, ಎರಡು ದಿನಗಳಿಂದ ಡೇವಿಡ್ ಜೊತೆಗೆ ವಾಸವಾಗಿದ್ದರು.
ಹಾಸನದಲ್ಲಿ ಮದುವೆಗೆ ಬಂದು ನಾಪತ್ತೆಯಾಗಿದ್ದ ಪ್ರಿಯಾಂಕಾಗಾಗಿ ಹುಡುಕಾಟ ನಡೆಸಲಾಗಿತ್ತು. ಪ್ರಿಯಕರನೊಂದಿಗೆ ಒಡವೆ ಸಮೇತ ಪರಾರಿಯಾಗಿದ್ದ ಪ್ರಿಯಾಂಕಾ ತನ್ನನ್ನು ಒಡವೆಗಾಗಿ ಕೊಲೆ ಮಾಡಿರುವ ರೀತಿ ಬಿಂಬಿಸಲು ಯತ್ನಿಸಿದ್ದಳು.
ಬೇಲೂರು ಪೊಲೀಸರು ಹುಡುಕಾಟ ನಡೆಸಿದ್ದರು. ಕುಣಿಗಲ್ ನ ಗೊಟ್ಟಿಕೆರೆಯ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಪೊಲೀಸರು ಬಾಗಿಲು ಬಡಿದಾಗ ಇಬ್ಬರು ಒಳಗಿದ್ದರು ಎನ್ನಲಾಗಿದೆ.




