ಗೋಕಾಕ: ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳು ಬಾರದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಡಲೇ ಅಧಿಕಾರಿಗಳು ಸಂತ್ರಸ್ತ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ವರದಿ ಮಾಡುವಂತೆ ಸೂಚನೆ ನೀಡಿ ಹಾಗೂ ಸ್ಥಳಿಯ ಅಧಿಕಾರಿಗಳು ಕೂಡಿಕೊಂಡು ಸಮನ್ವತೆಯಿಂದ ಕೆಲಸ ಮಾಡಲು ತಿಳಿಸಿ ಸಂತ್ರಸ್ಥರಿಗೆ ತೊಂದರೆ ಆಗದಂತೆ ಖಡಕ ಸೂಚನೆ ನೀಡಿದರು.

ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ, ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಮೂಡಲಗಿ ತಾ.ಪಂ. ಇಓ ಎಫ್.ಜಿ.ಚಿನ್ನನ್ನವರ, ಗೋಕಾಕ ತಾ.ಪಂ.ಇಓ ಪರಶುರಾಮ ಗಸ್ತಿ, ಡಿವೈಎಸ್ಪಿ ರವಿ ನಾಯಿಕ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆಗೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಲೋಳಸೂರ ಸೇತುವೆಗೆ ತೆರಳಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಮನೋಹರ ಮೇಗೇರಿ




