ವರದಿ: ಗಿರೀಶ್ ಕೆ ಭಟ್
ತುರುವೇಕೆರೆ: ತುಮುಲ್ ಚುನಾವಣೆಯಲ್ಲಿ ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಸಲುವಾಗಿ ಮಾಜಿ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಅವರು ಹಾಲು ಉತ್ಪಾದಕರೇ ಅಲ್ಲದಿದ್ದರೂ ಸಹ ಸುಳ್ಳು ದಾಖಲೆ ಸೃಷ್ಟಿಸಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿ.ವಿ.ಮಹಲಿಂಗಯ್ಯ ಮತ್ತು ಅವರ ಪತ್ನಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ತುಮಕೂರು ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಿ.ವಿ.ಮಹಲಿಂಗಯ್ಯ ಹಾಗೂ ಅವರ ಕುಟುಂಬ ತುರುವೇಕೆರೆಯಲ್ಲಿ ವಾಸವಿದ್ದು, ಇದನ್ನು ಪಟ್ಟಣ ಪಂಚಾಯ್ತಿ ಸಹ ದೃಢೀಕರಿಸಿದೆ. ಆದರೂ ಸಹ ಮಹಲಿಂಗಯ್ಯ ಎನ್.ಮಾವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹಾಗೂ ಅವರ ಪತ್ನಿ ಮುಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಪಡೆದಿದ್ದಾರೆ.
ಅಲ್ಲದೆ ತಾವು ಪಡೆದಿರುವ ಸಂಘಗಳಿಂದ ಮತ ಚಲಾಯಿಸುವ ಹಕ್ಕನ್ನೂ ಸಹ ಪಡೆದಿರುವುದು ಅಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಹೊರಟಿರುವ ಮಹಲಿಂಗಯ್ಯ ಅವರಿಗೆ ಸಂಘದ ಸದಸ್ಯತ್ವ ನೀಡಿ ಸಹಕಾರ ನೀಡಿರುವ ಎನ್.ಮಾವಿನಹಳ್ಳಿ ಹಾಗೂ ಮುಗಳೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಬೇಕೆಂದು ಜಿಲ್ಲಾ ಸಹಕಾರ ನಿಬಂಧಕರನ್ನು ಒತ್ತಾಯಿಸುವುದಾಗಿ ಹೇಳಿದರು.
ಸಿ.ವಿ.ಮಹಲಿಂಗಯ್ಯ ತುಮುಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಅಕ್ರಮ ದಾರಿ ತುಳಿದಿದ್ದರು. ತಮ್ಮ ಅಧಿಕಾರದ ಅವಧಿ ಕೆಲವೇ ತಿಂಗಳಿರುವಾಗ ಸುಮಾರು 200 ಕ್ಕೂ ಅಧಿಕ ಹುದ್ದೆಗಳನ್ನು ತುಂಬುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನವನ್ನು ಪರೀಕ್ಷಾರ್ಥಿಗಳು ಬಹಿರಂಗಪಡಿಸಿ ನ್ಯಾಯಾಲಯದ ಮೆಟ್ಟಿಲೇರಿ ನೇಮಕಾತಿಗೆ ತಡೆಯಾಜ್ಞೆ ತಂದಿದ್ದರು.
ಮಾಜಿ ಅಧ್ಯಕ್ಷರ ಮೇಲೆ ಹಲವಾರು ದೂರುಗಳಿರುವ ಕಾರಣ ಸಹಕಾರ ಸಂಘದ ಅಧಿಕಾರಿಗಳು ದಾಖಲೆ ಪರಿಶೀಲಿಸಬೇಕು ಹಾಗೂ ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಆಗ್ರಹಿಸಿದ ಅವರು, ಸಿ.ವಿ.ಮಹಲಿಂಗಯ್ಯ ಹಾಗೂ ಅವರ ಪತ್ನಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಧಾನ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವರದಿ: -ಗಿರೀಶ್ ಕೆ ಭಟ್




