ತುರುವೇಕೆರೆ: ತುರುವೇಕೆರೆ ಪಟ್ಟಣದ ಮನೆಮನೆಗೆ ಕೊಳವೆ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸುಮಾರು 10 ಕೋಟಿ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಕಾಮಗಾರಿಗೆ ಹೇಮಾವತಿ ನಾಲಾ ವಲಯದ ಕಛೇರಿ ಆವರಣದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಕೇಂದ್ರ ಸರ್ಕಾರ ಈಗಾಗಲೇ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಕೊಳಾಯಿ ಮೂಲಕ ಶುದ್ದ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದು, ತಾಲ್ಲೂಕಿನ 280 ಹಳ್ಳಿಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ ಮಿಷನ್-ಅರ್ಬನ್ ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ (ಅಮೃತ್) 2.0 ಯೋಜನೆಯಡಿ ನಗರ ಪ್ರದೇಶದ ಮನೆಮನೆಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಅದರಂತೆ ತುರುವೇಕೆರೆ ಪಟ್ಟಣದ ನಾಗರೀಕರಿಗೆ ಸುಮಾರು 10 ಕೋಟಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರನ್ನು ಕೊಳಾಯಿ ಮೂಲಕ ಸರಬರಾಜು ಮಾಡುವ ಯೋಜನೆಗೆ ಈ ದಿನ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ತುರುವೇಕೆರೆ ಪಟ್ಟಣದಲ್ಲಿ ಅಮೃತ್ 2.0 ಯೋಜನೆಯಡಿ 10 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ ಪಟ್ಟಣದ (3, 4, 5, 9, 13 ಮತ್ತು 14ನೇ ವಾರ್ಡ್) 6 ವಾರ್ಡ್ಗಳ ಸುಮಾರು 1500 ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡಲಾಗುವುದು. ಈ ಯೋಜನೆಯನ್ವಯ ಹೇಮಾವತಿ ನಾಲಾ ವಲಯದ ಆವರಣದಲ್ಲಿ ೫ಲಕ್ಷ ಲೀಟರ್ ನ ಟ್ಯಾಂಕ್, ಫಿಲ್ಟರ್ ಹೌಸ್ (ಜಲಶುದ್ಧಿಕರಣ ಘಟಕ) ಬಳಿ 20 ಲಕ್ಷ ಲೀಟರ್ ಸಾಮರ್ಥ್ಯದ ಎಂ.ಎಲ್.ಡಿ. ಹಾಗೂ 22 ಕಿಲೋಮೀಟರ್ನಷ್ಟು ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತದೆ ಎಂದ ಅವರು, ಗುತ್ತಿಗೆದಾರರು ಟ್ಯಾಂಕ್, ಫಿಲ್ಟರ್ ಹೌಸ್ ನಿರ್ಮಾಣದಲ್ಲಿ ಹಾಗೂ ಪೈಪ್ ಲೈನ್ ಕೆಲಸಗಳಲ್ಲಿ ಗುಣಮಟ್ಟದ ವಸ್ತುಗಳನ್ನು ಬಳಸಬೇಕು, ಕಾಮಗಾರಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಪಟ್ಟಣದ ನಾಗರೀಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್, ಸದಸ್ಯರಾದ ಅಂಜನ್ ಕುಮಾರ್, ಮಧು, ಚಿದಾನಂದ್, ಜಯಮ್ಮ, ಸುರೇಶ್, ನಾಮಿನಿ ಸದಸ್ಯ ರುದ್ರೇಶ್, ಗುತ್ತಿಗೆದಾರರಾದ ಕೊಂಡಾರೆಡ್ಡಿ, ಲಕ್ಷ್ಮೀನಾರಾಯಣ್, ಗ್ರಾಪಂ ಸದಸ್ಯ ದೇವರಾಜ್, ಮುಖಂಡ ರಂಗನಾಥ್, ಸುನಿಲ್, ಇಂಜಿನಿಯರ್ ಕೇಶವಮೂರ್ತಿ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




