ತುರುವೇಕೆರೆ: ಜನ್ಮ ನೀಡಿದ ತಾಯಿಯನ್ನು ಎಷ್ಟು ಪ್ರೀತಿಸುತ್ತೇವೋ, ಗೌರವಿಸುತ್ತೇವೋ ಅಷ್ಟೇ ಪ್ರೀತಿ, ಗೌರವವನ್ನು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಹೊಂದಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯ್ತಿ, ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ನಾಡು, ನುಡಿಗಾಗಿ ಸಾಕಷ್ಟು ಮಂದಿ ಮಹನೀಯರು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ. 1956 ರಲ್ಲಿ ಏಕೀಕರಣವಾದ ನಂತರ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದರು. ಅಂದಿನಿಂದ ಇಂದಿನವರೆಗೂ ನವೆಂಬರ್ 01 ರಂದು ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಕನ್ನಡ ಎಂಬುದು ಕೇವಲ ಭಾಷೆಯಲ್ಲ, ನಮ್ಮ ಉಸಿರು. ಮಾತೃಭಾಷೆಯನ್ನು ತಾಯಿಯಷ್ಟೇ ಗೌರವದಿಂದ ಕಾಣಬೇಕು. ಆದರೆ ಕನ್ನಡ ರಾಜ್ಯೋತ್ಸವ ಸೇರಿದಂತೆ ನಾಡಹಬ್ಬಗಳು ಕೇವಲ ಅಧಿಕಾರಿಗಳು, ಮಕ್ಕಳು, ಶಿಕ್ಷಕರಿಗೆ ಮಾತ್ರ ಎನ್ನುವಂತಾಗಿರುವುದು ಬೇಸರದ ಸಂಗತಿಯಾಗಿದೆ. ರಾಜ್ಯೋತ್ಸವ ನಮ್ಮ ಮನೆಮನಗಳ ಹಬ್ಬವಾಗಬೇಕು. ಪ್ರತಿಯೊಬ್ಬ ನಾಗರೀಕರು ಈ ಸಂಭ್ರಮದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪತ್ರಕರ್ತ ಗಿರೀಶ್ ಕೆ ಭಟ್ (ಪತ್ರಿಕಾ ಮಾಧ್ಯಮ), ಡಾ.ಶಶಿಧರ್(ವೈದ್ಯಕೀಯ), ಆರ್.ಮಲ್ಲಿಕಾರ್ಜುನ್ (ಸಮಾಜ ಸೇವೆ), ಚನ್ನಕೇಶವ (ಸಾಹಿತ್ಯ), ಧರಣೇಶ್ (ರಕ್ಷಣಾ ಪಡೆ), ಶಿವಾನಂದ್ (ಕ್ರೀಡೆ), ಪೂರ್ಣಚಂದ್ರ (ಕೃಷಿ), ಕುಮಾರಸ್ವಾಮಿ (ಸಂಗೀತ) ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಹಸೀಲ್ದಾರ್ ಕುಂಇ ಅಹಮದ್ ಧ್ವಜಾರೋಹಣ ನೆರವೇರಿಸಿದರು. ಮಾಯಸಂದ್ರ ಟಿಬಿ ಕ್ರಾಸ್ ಎಸ್.ಬಿ.ಜಿ. ಕಾಲೇಜಿನ ಡಾ.ಎ.ಬಿ.ಚಂದ್ರಶೇಖರ್ ಕನ್ನಡ ನಾಡು, ನುಡಿಯ ಬಗ್ಗೆ ಉಪನ್ಯಾಸ ನೀಡಿದರು.
ಪಪಂ ಅಧ್ಯಕ್ಷೆ ಆಶಾರಾಜಶೇಖರ್, ಉಪಾಧ್ಯಕ್ಷೆ ಭಾಗ್ಯಮಹೇಶ್, ಸದಸ್ಯರಾದ ಎನ್.ಆರ್.ಸುರೇಶ್, ಚಿದಾನಂದ್, ಆರ್.ಮಧು, ಜಯಮ್ಮ, ನೌಕರರ ಸಂಘದ ಅಧ್ಯಕ್ಷ ನಂ.ರಾಜು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಇನ್ನರ್ ವೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಇಒ ಶಿವರಾಜಯ್ಯ, ಬಿಇಒ ಸೋಮಶೇಖರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಕೃಷಿ ಸಹಾಯಕ ನಿರ್ದೇಶಕಿ ಪೂಜಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಸಿಐಟಿಯು ಸತೀಶ್, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ, ಲಯನ್ಸ್ ಅಧ್ಯಕ್ಷ ರಂಗನಾಥ್ ಸೇರಿದಂತೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್